ಕೋವಿಡ್-19 ಹೆಚ್ಚಳಕ್ಕೆ ಯುವಕರ ನಿರ್ಲಕ್ಷ್ಯ ಹೆಚ್ಚು ಕಾರಣ: ಏಮ್ಸ್ ನಿರ್ದೇಶಕ

ನವ ದೆಹಲಿ: ಕೋವಿಡ್-19 ಪ್ರಕರಣಗಳ ಹರಡುವಿಕೆಗೆ ಯುವಕರು ಕಾರಣವಾಗುತ್ತಿದ್ದಾರೆ ಎಂದು ದೆಹಲಿಯಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದರೂ ಯುವಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಗುಂಪುಗೂಡಿ ಹೊರಗೆ ಹೋಗಿ ಜನರೊಂದಿಗೆ ಬೆರೆಯುತ್ತಿದ್ದಾರೆ. ಸಾಮಾಜಿಕ ಅಂತರವಿಲ್ಲ. ತಮಗೆ ಸೋಂಕು ತಗುಲಿದರೂ ಅದರ ಪ್ರಭಾವ ಕಡಿಮೆಯಿರುತ್ತದೆ ಎಂಬ ಭಾವನೆಯಿಂದಾಗಿ ಅವರಲ್ಲಿ ಭಯ ಕಡಿಮೆಯಾಗಿದೆ. ಇದರಿಂದ ಅವರು ಕೋವಿಡ್ ತಡೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಜೊತೆಗೆ ತಮ್ಮಿಂದಾಗಿ ಬೇರೆಯವರಿಗೆ ಹರಡುತ್ತದೆ ಎಂಬುದನ್ನೂ ಯೋಚಿಸುತ್ತಿಲ್ಲ ಎಂದು ಗುಲೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವಕರಿಂದ ವಯಸ್ಸಾದವರಿಗೆ ಸೋಂಕು ತಗುಲುವ ಅಪಾಯಗಳು ಅಧಿಕ. ಹೀಗಾಗಿ ವಯಸ್ಕರು ಹಾಗೂ ಆದ್ಯತೆಯ ವಯೋಮಾನದವರು ಲಸಿಕೆ ತೆಗೆದುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಕೋವಿಡ್-19 ಸನ್ನಿವೇಶದ ಕುರಿತು ಚರ್ಚಿಸಲು ಬುಧವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯ ಡಾ. ವಿಕೆ ಪೌಲ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಪಂಜಾಬ್ ಸರ್ಕಾರ ಮತ್ತು ಚಂಡೀಗಡ ಆಡಳಿತ ತೆಗೆದುಕೊಂಡ ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement