ಕೊರೊನಾ ಮಾರ್ಗಸೂಚಿ ಜಾರಿ ವಿಷಯದಲ್ಲಿ ರಾಜಿಯಿಲ್ಲ: ಸಚಿವ ಡಾ.ಸುಧಾಕರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವಂತ ನೂತನ ಮಾರ್ಗಸೂಚಿ ಕ್ರಮಗಳು ಏಕಾಏಕಿ ಜಾರಿಗೆ ತಂದಿಲ್ಲ, ನಿಯಮ ಜಾರಿ ವಿಷಯದಲ್ಲಿ ಯಾವುದೇ ರಾಜಿಯೂ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ಥಿಯೇಟರ್​ಗಳಲ್ಲಿ ಶೇ 100ರಷ್ಟು ಆಸನಗಳಿಗೆ ಅವಕಾಶ ನೀಡಬೇಕು ಎಂದು ನಟ ಪುನೀತ್ ರಾಜ್​ಕುಮಾರ್ ಮನವಿ ಮಾಡಿಕೊಂಡ ಬೆನ್ನಲ್ಲೇ ಸಚಿವ ಡಾ.ಕೆ.ಸುಧಾಕರ್ ಈ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ವಲಯಗಳ ಬಗ್ಗೆಯೂ ನನಗೆ ಗೌರವ, ಅಭಿಮಾನ ಇದೆ. ಎಲ್ಲಾ ಕ್ಷೇತ್ರಗಳಿಗೂ ನೂತನ ಕೊರೊನಾ ತಡೆ ಮಾರ್ಗಸೂಚಿ ಅನ್ವಯವಾಗಲಿದೆ. ಇದರ ಹಿಂದೆ ಕೇವಲ ಕೊರೊನಾ ಸೋಂಕು ತಡೆಯುವ ಉದ್ದೇಶವಿದೆಯೇ ಹೊರತು, ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಶಾಲೆ, ಜಿಮ್, ಸ್ವಿಮ್ಮಿಂಗ್ ಪೂಲ್, ಅಪಾರ್ಟ್‌ಮೆಂಟ್, ಮದುವೆ​ಗಳಿಗೂ ಕೊರೊನಾ ತಡೆಯ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ. ರಾಜಕೀಯ ಕ್ಷೇತ್ರದ ಉಪಚುನಾವಣೆಗೂ ಚುನಾವಣಾ ಆಯೋಗದಿಂದ ಮಾರ್ಗಸೂಚಿ ನೀಡಲಾಗಿದೆ. ಧಾರ್ಮಿಕ ಕ್ಷೇತ್ರಗಳಿಗೂ ಕಠಿಣ ನಿಯಮ ಜಾರಿಗೊಳಿಸಿದ್ದೇವೆ. ಎಂದು ಸಚಿವರು ತಿಳಿಸಿದ್ದಾರೆ.
ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ಗುರುವಾರಷ್ಟೇ ತೆರೆಗೆ ಬಂದಿತ್ತು. ಹೀಗಿರುವಾಗಲೇ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಚಿತ್ರಮಂದಿರದಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶ ಹೊರಡಿಸಿದ್ದು, ಇದಕ್ಕೆ ಪುನೀತ್​ ರಾಜ್​ಕುಮಾರ್​ ಅಸಮಾಧಾನ ವ್ಯಕ್ತಪಡಿಸಿದ್ದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಿಗೆ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಎಲ್ಲರೂ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಚುನಾವಣೆ ಪ್ರಚಾರ ಸಭೆಗಳಲ್ಲಿಸಾವಿರಾರು ಜನರು ಸೇರುತ್ತಿದ್ದಾರೆ. ಹೀಗಿರುವಾಗ ಸಿನಿಮಾ ರಂಗವನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ ಎಂದು ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್​ ಆನಂದ್​ ರಾಮ್ ಫೇಸ್​ಬುಕ್​ ಲೈವ್​ನಲ್ಲಿ​ ಹೇಳಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ 17 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ; ಯೆಲ್ಲೋ ಅಲರ್ಟ್‌ ಘೋಷಣೆ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement