ಕೊರೊನಾ ಪೀಡಿತ ತಾಯಿಗೆ ಆಮ್ಲಜನಕ ಕೇಳಲು ಬಂದವನಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಕೇಂದ್ರ ಸಚಿವ.! ವಿಡಿಯೋ ವೈರಲ್‌

ನವ ದೆಹಲಿ: ಕೊರೊನಾ ಸೋಂಕು ಪೀಡಿತ ತಾಯಿಗೆ ಆಮ್ಲಜನಕ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಎರಡು ದಿನಗಳ ಹಿಂದೆ ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ದಾಮೋಹ್‌ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್ ಗಳನ್ನು ಲೂಟಿ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.ಈ ವೇಳೆ ವ್ಯಕ್ತಿಯೊಬ್ಬರು ಕೇಂದ್ರ ಸಚಿವರ ಬಳಿ ಬಂದು ನನ್ನ ತಾಯಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಮ್ಲಜನಕದ ಸಿಲಿಂಡರ್ ಅಗತ್ಯವಿದೆ. 36 ಗಂಟೆಗಳ ಬಳಿಕ ಆಕ್ಸಿಜನ್ ನೀಡುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ, ಇನ್ನೂ ಕೊಟ್ಟಿಲ್ಲ ಎಂದು ಹೇಳುವಾಗ ವ್ಯಕ್ತಿ ಸಚಿವರ ಕಡೆಗೆ ಬೆರಳು ತೋರಿಸಿ ಮಾತನಾಡಿದ್ದರು. ಇದರಿಂದ ಸಿಟ್ಟಿಗೆದ್ದ ಸಚಿವರು ಆ ವ್ಯಕ್ತಿಗೆ ಕೈಕೆಳಗಿಳಿಸುವಂತೆ ಸೂಚಿಸಿದರು. ಇದೇ ಧಾಟಿಯಲ್ಲಿ ಮಾತನಾಡಿದರೆ, ಕಪಾಳಕ್ಕೆ ಹೊಡೆಯುತ್ತೇನೆಂದು ಹೇಳಿದರು.
ಸಚಿವರು ಹೀಗೆಲ್ಲ ಮಾತನಾಡಿದ್ದನ್ನು ಕೇಳಿ ಅಳಲಾರಂಭಿಸಿದ ಆ ವ್ಯಕ್ತಿ, ಹೌದು, ನನಗೆ ಅದುವೇ ಸಿಗುತ್ತದೆ ಎಂಬುದು ಗೊತ್ತಿದೆ. ನನ್ನ ತಾಯಿ ಅಲ್ಲಿಯೇ ಮಲಗಿದ್ದಾಳೆ. ಈಗ ನಾನೇನು ಮಾಡಬೇಕು ಎಂದು ಕೇಳಿದ್ದಾನೆ. ಈ ಸಂದರ್ಭದಲ್ಲಿ ಈ ಘಟನೆಯ ವಿಡಿಯೋ ರೆಕಾರ್ಡ್ ಆಗುತ್ತಿರುವುದನ್ನು ಗಮನಿಸಿದ ಸಚಿವರು ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಸಿದ್ದಾರೆ.

ನಂತರ ಆ ವ್ಯಕ್ತಿಯ ಬಳಿ ನಿಮಗೆ ಯಾರಾದರೂ ಆಮ್ಲಜನಕ ಸಿಲಿಂಡರ್ ನಿರಾಕರಿಸಿದ್ದಾರೆಯೇ ಎಂದು ಕೇಳಿದರು. . ಆಗ ಆ ವ್ಯಕ್ತಿ, ಹೌದು, ಅವರು ನಿರಾಕರಿಸಿದರು, ನಮಗೆ ಐದು ನಿಮಿಷ ಮಾತ್ರ ಆಕ್ಸಿಜನ್ ಸಿಕ್ಕಿತು ಎಂದು ಉತ್ತರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಘಟನೆ ಕುರಿತು ಕಾಂಗ್ರೆಸ್ ಮುಖ್ಯ ವಕ್ತಾರ ಕೆ.ಕೆ.ಮಿಶ್ರಾ ಅವರು ಟ್ವೀಟ್ ಮಾಡಿದ್ದು, ಉಪಚುನಾವಣೆಗೂ ಮುನ್ನ ದಾಮೋಹ್ ನಲ್ಲಿ ಸೋಂಕಿಗೊಳಗಾಗುವ ಪ್ರತಿಯೊಬ್ಬರನ್ನೂ ವ್ಯಕ್ತಿಯನ್ನೂ ಸಚಿವರ ಕಾರಿನಲ್ಲಿ ಭೋಪಾಲ್ ಅಥವಾ ಜಬಲ್ಪುರ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತಿತ್ತು. ಉಪಚುನಅವಣೆ ಮುಗಿದ ಮೇಲೆ ಬಿಜೆಪಿ ಕಾರ್ಯಕರ್ತ ತನ್ನ ತಾಯಿಯ ಜೀವ ಉಳಿಸಲು ಆಕ್ಸಿಜನ್ ಕೇಳಿದರೆ ಕಪಾಳಕ್ಕೆ ಹೊಡೆಯುತ್ತೇನೆಂದು ಸಚಿವರು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement