ಬೆಳಗಾವಿ: ಬದುಕಿದ್ದ ಕೋವಿಡ್ -19 ರೋಗಿಯೊಬ್ಬನನ್ನು ಮೃತಪಟ್ಟರೆಂದು ಘೋಷಿಸಿ ಎಡವಟ್ಟು ಮಾಡಿದ ಬೆಳಗಾವಿ ಖಾಸಗಿ ಆಸ್ಪತ್ರೆಯೊಂದು ಇನ್ನೊಬ್ಬ ವ್ಯಕ್ತಿಯ ಶವವನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸಿ ಮತ್ತೊಂದು ಎಡವಟ್ಟು ಮಾಡಿದ ಘಟನೆ ವರದಿಯಾಗಿದೆ.
ಅಥಣಿ ತಾಲೂಕಿನ ಮೋಲೆ ಗ್ರಾಮದ ಪಯಪ್ಪ ಸತ್ಯಪ್ಪ ಹಲಗಲಿ ಅವರನ್ನು ಕೋವಿಡ್ -19 ಚಿಕಿತ್ಸೆಗಾಗಿ ಮೇ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಯು ಅವರು ಮೃತಪಟ್ಟರೆಂದು ಹೇಳಿದೆ. ಅಲ್ಲದೆ ಸೀಲ್ ಮಾಡಿದ್ದ ಮೃತದೇಹವನ್ನು ಅಲ್ಲಿಗೆ ಆಗಮಿಸಿದ್ದ ರಕ್ತಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ವರದಿ ಪ್ರಕಾರ, ದೇಹ ಸುತ್ತಿದ್ದ ಬಟ್ಟೆಯನ್ನೇ ತೆರೆಯದೆ ಮತ್ತು ಸತ್ತವರ ಗುರುತನ್ನು ದೃಢಪಡಿಸಿಕೊಳ್ಳದೆ ಶೋಕತಪ್ತ ಕುಟುಂಬ ಸದಸ್ಯರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸರ್ಕಾರ ಸೂಚಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಶವವನ್ನು ಅಂತ್ಯಸಂಸ್ಕಾರ ಮಾಡಿದೆ.
ಭಾನುವಾರ ಸಂಜೆ ದಹನ ಮಾಡಿದ ಕೆಲವು ಗಂಟೆಗಳ ನಂತರ, ಅವರ ಕುಟುಂಬಕ್ಕೆ ರೋಗಿಯಿಂದಲೇ ಕರೆ ಬಂದಿದೆ. ಆಸ್ಪತ್ರೆಯ ಸಿಬ್ಬಂದಿಗಳು ತಪ್ಪಾಗಿ ಬೇರೆ ವ್ಯಕ್ತಿಯ ಶವವನ್ನು ನೀಡುವ ಮೂಲಕ ಕುಟುಂಬಗಳ ಭಾವನೆಗಳೊಂದಿಗೆ ಆಟವಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಂತರ,ಕಾಗವಾಡದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಥಣಿಯ ತಹಶೀಲ್ದಾರ್ ಡಿಎಸ್ಪಿ ಎಸ್.ಜಿ.ಗಿರೀಶ್ ಸಮ್ಮುಖದಲ್ಲಿ ಮೃತರ ಅವಶೇಷಗಳನ್ನು ನಿಜವಾದ ರಕ್ತಸಂಬಂಧಿಗಳಿಗೆ ಹಸ್ತಾಂತರಿಸಲಾಯಿತು. ‘
ಇಬ್ಬರೂ ರೋಗಿಗಳು ಒಂದೇ ಹೆಸರಿನವರಾಗಿದ್ದರಿಂದ ಅವರನ್ನು ಒಂದೇ ದಿನಾಂಕದಂದು ದಾಖಲಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ