ಬಿಡುಗಡೆಯಾಗುವ ರೋಗಿಗಳು-ಖಾಲಿ ಬೆಡ್ ಬಗ್ಗೆ ಪ್ರತಿದಿನ ಮಾಹಿತಿ ನೀಡಿ; ಖಾಸಗಿ ವೈದ್ಯಕೀಯ ಕಾಲೇಜಿನವರಿಗೆ ಸೂಚನೆ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ  ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್ ಅನ್ನು ಇನ್ನು ಮುಂದೆ ಪ್ರತಿದಿನ ಕೋವಿಡ್ ವಾರ್ ರೂಂ  ಮತ್ತು ಆಪ್ತಮಿತ್ರ ಪೋರ್ಟಲ್ ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಕಟ್ಟು ನಿಟ್ಟಿನ‌ ಸೂಚನೆ ನೀಡಲಾಗಿದೆ ಎಂದು ಕೋವಿಡ್ ಚಿಕಿತ್ಸಾ ಹಾಸಿಗೆ ಉಸ್ತುವಾರಿ ಹಾಗೂ ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖಂಡರುಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಪ್ರತಿದಿನ ವೈದ್ಯಕೀಯ ಕಾಲೇಜುಗಳಿಂದ ಎಷ್ಟು ರೋಗಿಗಳು ದಾಖಲಾಗುತ್ತಾರೆ?  ಎಷ್ಟು ರೋಗಿಗಳು ಬಿಡುಗಡೆ ಹೊಂದುತ್ತಾರೆ ಎಂಬುದರ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಗುರುವಾರದ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಇದರ ಪರಿಣಾಮವಾಗಿ ಆಮ್ಲಜನಕ, ಎಚ್ ಡಿ ಯು, ವೆಂಟಿಲೇಟರ್ ಸೇರಿದಂತೆ ಒಟ್ಟು 1035 ವಿವಿಧ ಪ್ರಕಾರದ ಹಾಸಿಗೆಗಳು ಸರ್ಕಾರದ ಸುಪರ್ದಿಗೆ ಲಭಿಸಿವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಒಟ್ಟು 5000 ಸ್ಟೆಪ್‌ ಡೌನ್‌ ಆಸ್ಪತ್ರೆ ನಿರ್ಮಾಣದ ಗುರಿ ಇದೆ. ಇದಕ್ಕಾಗಿ ಆಸ್ಪತ್ರೆ ಪಕ್ಕದ ದೊಡ್ಡ ಹೊಟೇಲ್ ಗಳಲ್ಲಿನ‌ ರೂಮುಗಳನ್ನು ಪಡೆಯಲಾಗುತ್ತಿದೆ.‌ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಕೋವಿಡ್ ರೋಗಿಗಳ ತಪಾಸಣೆಗೆ ಸ್ನಾತಕೋತ್ತರ, ನರ್ಸಿಂಗ್ ಮತ್ತು ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವೆಯನ್ನು  ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಗೌರವಧನ ನೀಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ಆಮ್ಲಜನಕ ಬೆಡ್ ಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಈ ವ್ಯವಸ್ಥೆ ಕಲ್ಪಿಸಲು ತಗಲುವ ಒಟ್ಟು ವೆಚ್ಚದ ಶೇಕಡ 75ರಷ್ಟು ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ ಎಂದ ಅವರು, ಸರ್ಕಾರಕ್ಕೆ ನೀಡಬೇಕಾಗಿರುವ ಹಾಸಿಗೆಗಳ ಕುರಿತು ಮನವರಿಕೆ ಮಾಡಿಕೊಳ್ಳುವ ಸಂಬಂಧ ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಒಬ್ಬ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು.  ಪ್ರತಿ ಐದು ಆಸ್ಪತ್ರೆಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ ಒಟ್ಟಾರೆ ಸರ್ಕಾರದ ಪಾಲಿನ ಹಾಸಿಗೆಗಳು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement