ಕರ್ನಾಟಕದಲ್ಲಿಯೂ ಲಾಕಡೌನ್‌..?: ಸುಳಿವು ನೀಡಿದ ಸಚಿವ ಸುಧಾಕರ ಹೇಳಿಕೆ

ಬೆಂಗಳೂರು: ಜನತಾ ಕರ್ಫ್ಯೂ ಇವರೆಗೆ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸಂಪೂರ್ಣ ಲಾಕ್‍ಡೌನ್ ಜಾರಿ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಲಾಕ್‍ಡೌನ್‍ನಿಂದ ನಿರೀಕ್ಷಿತ ಪ್ರಯೋಜನವಾಗಿಲ್ಲ. ಹೀಗಾಗಿ ಪೂರ್ಣ ಲಾಕ್‍ಡೌನ್ ಮಾಡಬೇಕಾಗಿ ಬರಬಹುದು ಎಂದು ಅವರು ಹೇಳಿದ್ದಾರೆ.
ಮೇ 12ರಂದು ಜನತಾ ಲಾಕ್‍ಡೌನ್ ಅವಧಿ ಮುಗಿಯಲಿದೆ. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸಂಪೂರ್ಣ ಲಾಕ್‍ಡೌನ್ ಸುಳಿವು ನೀಡಿದರು.
ಬುಧವಾರದ ವರೆಗೆ ಒಂದು ಕೋಟಿ ಲಸಿಕೆ ಹಾಕಿದ್ದೇವೆ. 18 ರಿಂದ 45 ವರ್ಷದ ವರಿಗೆ ಮೇ 15ರಿಂದ ಲಸಿಕೆ ಹಾಕಲು ಕ್ರಮಕೈಗೊಳ್ಳುತ್ತೇವೆ. ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ನ ಎಲ್ಲರಿಗೂ ಲಸಿಕೆ ಹಾಕಲು ಆದ್ಯತೆ ನೀಡಲಾಗುವುದು. ಜನರನ್ನು ಸುರಕ್ಷಿತವಾಗಿರಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ. ಜನರೂ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಆಮ್ಲಜನಕದ ಕೊರತೆಯಿಂದ ಪಾರಾಗಲು ನಾವು ವಾತಾವರಣದಿಂದ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಿದ್ದೇವೆ. 50 ರಿಂದ ಒಂದು ಲಕ್ಷ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಿ ಪ್ರತಿ ಜಿಲ್ಲೆಗೆ ಒಂದು ಸಾವಿರ ಯಂತ್ರಗಳನ್ನು ಕೊಡಲು ತೀರ್ಮಾನಿಸಿದ್ದೇವೆ. ಇದರ ಜತೆಗೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಆಕ್ಸಿಜನ್ ಸಾಂದ್ರಕಗಳನ್ನು ಆಳವಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅವರು ವಿವರಿಸಿದರು.
ಹಿರಿಯ ಸಚಿವರುಗಳಿಗೆ ಅಧಿಕಾರ ಹಂಚಿಕೆ ಮಾಡಿರುವುದರಿಂದ ನನಗೆ ಆನೆಬಲ ಬಂದಂತಾಗಿದೆ. ಈ ಬಗ್ಗೆ ಖಂಡಿತ ಬೇಸರವಿಲ್ಲ. ಎಲ್ಲಾ ಸಚಿವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಮೂರ್ನಾಲು ದಿನಗಳೊಳಗೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ಶಾಸಕ ರೇಣುಕಾಚಾರ್ಯ ಅವರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಧಾಕರ್ ಅವರು, ನಾನು ರಾಜೀನಾಮೆ ನೀಡಿದ ನಂತರವೇ ಸಚಿವರಾಗಿರುವುದು. ಈ ಸಮಯದಲ್ಲಿ ನಾನು ಇಂತಹವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರ ಬಗ್ಗೆಯೂ ನಾನು ಹಗುರವಾಗಿ ಮಾತನಾಡಲ್ಲ ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ; ಇಬ್ಬರು ಪ್ರಯಾಣಿಕರ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement