ನವ ದೆಹಲಿ: ಭಾರತಕ್ಕೆ ಹೊಡೆತ ನೀಡುತ್ತಿರುವ ಕೋವಿಡ್ ಎರಡನೇ ಅಲೆಯ ನಿರ್ವಹಣೆ ಕುರಿತು ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರು ಸಲಹೆ ನೀಡಿದ್ದಾರೆ.
ಭಾನುವಾರ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಖರ್ಗೆ ಅವರು, ಜನ ಸಾಮಾನ್ಯರಿಗೆ, ಮಧ್ಯಮ ವರ್ಗದ ಕುಟುಂಬಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಪಡುತ್ತಿವೆ. ತಮ್ಮ ಕುಟುಂಬಸ್ಥರನ್ನು ಉಳಿಸಿಕೊಳ್ಳಲು ಆಸ್ತಿ, ಆಭರಣ ಮಾರುತ್ತಿದ್ದಾರೆ. ಬೆವರು ಸುರಿಸಿ ಉಳಿತಾಯ ಮಾಡಿದ ಹಣವನ್ನೆಲ್ಲ ಖರ್ಚು ಮಾಡುವಂತಾಗಿದೆ. ಇಂತಹ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು. ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕೋವಿಡ್ ಉಲ್ಬಣದಿಂದ ಉಂಟಾಗಿರುವ ಬಿಕ್ಕಟ್ಟು ಅಸಾಧಾರಣ ಪರಿಸ್ಥಿತಿ ತಂದೊಡ್ಡಿದೆ. ಇದರ ವಿರುದ್ಧ ನಾಗರಿಕ ಸಮಾಜ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ಮರೆತಂತಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಸಮಗ್ರ ನೀಲನಕ್ಷೆಯನ್ನು ರೂಪಿಸಿ ಎಲ್ಲರಿಗೂ ಲಸಿಕೆ ವ್ಯವಸ್ಥೆ ಮಾಡಬೇಕು. ಲಸಿಕೆಗಾಗಿ ನಿಗದಿಪಡಿಸಿದ 35 ಸಾವಿರ ಕೋಟಿ ರೂಪಾಯಿ ಬಳಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕು ಎಂದು ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕು. ವೈದ್ಯಕೀಯ ಸಲಕರಣೆಗಳ ಮೇಲಿನ ಸುಂಕ ಮನ್ನಾ ಮಾಡಬೇಕು. ಈಗ ಲಸಿಕೆಗಳಿಗೆ ಶೇಕಡ 5ರಷ್ಟು, ಪಿಪಿಇ ಕಿಟ್ ಗಳಿಗೆ ಶೇಕಡ 5 -12 ರಷ್ಟು, ಆಂಬುಲೆನ್ಸ್ ಗಳಿಗೆ ಶೇ.28, ಆಮ್ಲಜನಕ ಸಾಂದ್ರಕಗಳಿಗೆ ಶೇಕಡ 12 ರಷ್ಟು ತೆರಿಗೆ ಇದೆ. ಇದನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ವಲಸಿಗರಿಗೆ ನೆರವಾಗಲು ಪರಿಹಾರ ಸಾಮಗ್ರಿ ವಿತರಣೆ ಹೆಚ್ಚಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ವೇತನ ಹೆಚ್ಚಿಸಬೇಕು ಮತ್ತು ಕೆಲಸದ ದಿನವನ್ನು 100 -200 ದಿನಗಳಿಗೆ ಹೆಚ್ಚಳ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ