44 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ವೈರಸ್ ಪತ್ತೆ

ನವ ದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಅಲೆಯು ವೇಗವಾಗಿ ಹರಡಲು ಕಾರಣವಾಗಿರುವ B.1.617 ರೂಪಾಂತರಿ ವೈರಸ್‌ ವಿಶ್ವದ 44 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೊನಾ ವೈರಸ್ ಸೋಂಕಿನ B.1.617 ರೂಪಾಂತರ ತಳಿಯ 2020ರ ಅಕ್ಟೋಬರ್ ನಲ್ಲಿ ಭಾರತದಲ್ಲಿ ಪತ್ತೆಯಾಗಿತ್ತು. ಡಬ್ಲುಹೆಚ್‌ಓ ವ್ಯಾಪ್ತಿಯ 44 ರಾಷ್ಟ್ರಗಳಿಂದ 4500 ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ ಇದೇ ರೂಪಾಂತರ ತಳಿ ಪತ್ತೆಯಾಗಿದೆ. ಹೆಚ್ಚುವರಿವಾಗಿ ಐದು ದೇಶಗಳಿಂದ ಸೋಂಕುಪತ್ತೆ ಹಚ್ಚುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ವರದಿ ಸ್ವೀಕರಿಸಿದೆ.
ಭಾರತವನ್ನು ಹೊರತುಪಡಿಸಿದಂತೆ B.1.617 ರೂಪಾಂತರ ತಳಿಯಿಂದ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲೂ ರೂಪಾಂತರ ತಳಿಯ ಉಲ್ಬಣ ಹೆಚ್ಚಾಗಿರುವುದು ಅಂಕಿ-ಅಂಶಗಳ ಸಹಿತ ಸಾಬೀತಾಗಿದೆ.
ಕೊರೊನಾ ವೈರಸ್ B.1.617 ರೂಪಾಂತರ ತಳಿ ಶೀಘ್ರ ಗತಿಯಲ್ಲಿ ಹರಡುವ ಸಾಮರ್ಥ್ಯ ಹೊಂದಿದೆ. ರೂಪಾಂತರ ವೈರಸ್ ಕಾಣಿಸಿಕೊಂಡ ದೇಶಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ರೂಪಾಂತರ ತಳಿಯ ವಿರುದ್ಧ ಲಸಿಕೆಗಳ ಪರಿಣಾಮ ಸೀಮಿತವಾಗಿರಬಹುದು ಎಂದು ಅದು ಹೇಳಿದೆ.
ಭಾರತದಲ್ಲಿ ಏಪ್ರಿಲ್ ಅಂತ್ಯದ ವೇಳೆಗೆ B.1.617.1 ರೂಪಾಂತರ ತಳಿಯು ಶೇ.21 ಹಾಗೂ B.1.617.2 ರೂಪಾಂತರ ತಳಿಯು ಶೇ.7ರಷ್ಟು ಪ್ರಮಾಣದಲ್ಲಿ ಪತ್ತೆಯಾಗಿದೆ. ಇದರ ಜೊತೆಗೆ ಇಂಗ್ಲೆಂಡಿನಲ್ಲಿ ಮೊದಲ ಪತ್ತೆಯಾದ B.1.1.7 ರೂಪಾಂತರ ತಳಿ ಕೂಡ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement