
(ದಿನಾಂಕ ಮೇ ೧೪ ರಂದು ಬಸವ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಆ ನಿಮಿತ್ತವಾಗಿ ನಿವೃತ್ತ ಗ್ರಂಥಪಾಲಕರಾದ ಬಿ.ಎಸ್.ಮಾಳವಾಡರು ಲೇಖನ ಬರೆದಿದ್ದಾರೆ)
ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಜಗಜ್ಯೋತಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ, ನುಡಿಗಳನ್ನು ಸ್ಫಟಿಕದ ಸಲಾಕೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ಸಮಾಜಕ್ಕೆ ಚೈತನ್ಯ ತುಂಬಿದ ಬಸವಣ್ಣನವರು ಅಂತರಂಗ ಹಾಗೂ ಬಹಿರಂಗಗಳೆರೆಡನ್ನು ಪರಿಶುದ್ಧವಾಗಿಸಿಕೊಂಡು, ಮಾನವರ ಬದುಕಿಗೆ ಜ್ಯೋತಿಯಾದವರು. ಅಂತೆಯೇ ಅವರು ಜಗಜ್ಯೋತಿ ಬಸವೇಶ್ವರರು.
ಸಕಲ ಜೀವಾತ್ಮರಿಗೆ ಲೇಸಾಗಲೆಂದು ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಚಳವಳಿಯ ಮೂಲಕ ಎಲ್ಲ ಪ್ರಕಾರದ ಕಾಯಕ ಜೀವಿಗಳನ್ನು ಒಂದುಗೂಡಿಸಿ ಇಂದಿನ ಸಂಸತ್ತಿಗೆ ಮಾದರಿಯಾದ ಅನುಭವ ಮಂಟಪದ ಮೂಲಕ ಶರಣ ಸಂಸ್ಕೃತಿಯನ್ನು ಬೆಳೆಸಿದವರು. ಯಾವುದೇ ಕಾಯಕವಿರಲಿ ಆ ಕಾಯಕದಲ್ಲಿ ಬೇಧ ಎಣಿಸದೇ ಶ್ರದ್ದೆಯಿಂದ ಮಾಡಿದಲ್ಲಿ ಕೈಲಾಸವನ್ನು ಕಾಣಬಹುದಾಗಿದೆ. ಎಂದು ಲೋಕಕ್ಕೆ ಸಾರಿದರು.
ಎಲ್ಲಿ ಕಾಯಕ ಜೀವಿಗಳಿಗೆ ಬದುಕಿನಲ್ಲಿ ಅರಿವು ಮೂಡಿಸಿ ಅಕ್ಷರ ಕ್ರಾಂತಿಯ ಮೂಲಕ ಸಾಕ್ಷರತೆಗೆ ನಾಂದಿ ಹಾಡಿದ್ದರ ಫಲವಾಗಿ ಅವರೆಲ್ಲ ಅಕ್ಷರ ಕಲಿತು ತಮ್ಮ ಕಾಯಕದಲ್ಲಿ ಕಂಡುಕೊಂಡ ಅನುಭವಗಳನ್ನು ಅನುಭಾವದ ಮಟ್ಟಕ್ಕೇರಿಸಿ ಅತ್ಯಮೂಲ್ಯವಾದ ವಚನಗಳನ್ನು ರಚಿಸಿದರು. ಇಂತಹುದು ಅದ್ಭುತ ಸಾಧನೆ ೧೨ ನೇ ಶತಮಾನಕ್ಕಿಂತ ಮುಂಚೆ ಜಗತ್ತಿನ ಯಾವ ಮೂಲೆಯಲ್ಲಿಯೂ ಶ್ರಮಿಕ ವರ್ಗವನ್ನು ಒಂದುಗೂಡಿಸಿ ಚಳವಳಿ ಮಾಡಿದ ದಾಖಲೆ ಇಲ್ಲವೆಂದೇ ಹೇಳಬಹುದು.
ಕ್ರಿ.ಶ.೧೧೩೪ ರ ವೈಶಾಖ ಮಾಸದ ಅಕ್ಷಯ ತೃತೀಯ ದಿನದಂದು ಈಗಿನ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ ಶ್ರೀ ಮಾದರಸ, ಮಾದಲಾಂಬಿಕೆ ದಂಪತಿ ಉದರದಲ್ಲಿ ಜಗಜ್ಯೋತಿ ಬಸವೇಶ್ವರರು ಜನಿಸಿದರು. ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದ ಬಸವಣ್ಣನವರು ತಮಗೆ ಹಾಕಿದ ಜನಿವಾರವನ್ನು ಕಿತ್ತೆಸೆದು ಅಕ್ಕನಾಗಮ್ಮ, ಭಾವ ಶಿವಸ್ವಾಮಿಯರೊಂದಿಗೆ ಗುರು ಜಾತಿವೇದ ಮುನಿಗಳ ಆಶ್ರಮ ಕಪ್ಪಡಿ ಸಂಗಮಕ್ಕೆಆಗಮಿಸಿ, ಸಮಾಜದ ಅನಿಷ್ಟ ಸಂಪ್ರದಾಯಗಳಿಗೆ ವಿದಾಯ ಹೇಳಿದರು.
ಜಾತಿ-ಮತ ಮತ್ತು ಪಂಥಗಳಿಂದ ಹೊರಬಂದು ಜ್ಞಾನಿಗಳ ಕೂಟ ನಿರ್ಮಿಸಿ, ವೈಚಾರಿಕ ಮನೋಭಾವದ ಪ್ರಗತಿಶೀಲರನ್ನು ಒಂದೆಡೆ ಕಲೆ ಹಾಕಿದ ಮಹಾನ್ ಅನುಭಾವಿ ಬಸವೇಶ್ವರರು ಗಂಗಾಂಬಿಕೆ ಹಾಗೂ ನೀಲಾಂಬಿಕೆ ಅವರನ್ನು ವಿವಾಹವಾದ ನಂತರ ಕಲಚೂರಿ ವಂಶದ ದೊರೆಯಾದ ಬಿಜ್ಜಳನ ಆಸ್ಥಾನದಲ್ಲಿ ಸೇರಿ, ತಮ್ಮ ನಿಷ್ಠೆಯಿಂದ ರಾಜನ ಮನಸ್ಸು ಗೆದ್ದ ಬಸವೇಶ್ವರರು ತಮ್ಮ ಕಾರ್ಯದಕ್ಷತೆಯಿಂದ ಆಸ್ಥಾನದಲ್ಲಿ ಉನ್ನತ ಪದವಿಗಳನ್ನು ಪಡೆದು, ರಾಜ್ಯದ ಖಜಾನೆಯನ್ನು ಅನೇಕ ಒಳ್ಳೆಯ ಕಾರ್‍ಯಗಳಿಗೆ ಉಪಯೋಗಿಸಿದರು.
ಬಸವಣ್ಣನವರ ಒಂದೊಂದು ವಚನಗಳು ಅನೇಕ ಸೂತ್ರಗಳನ್ನು, ಉಪದೇಶ ತತ್ವಗಳನ್ನು ಒಳಗೊಂಡಿವೆ. ಸಮಾಜದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದ ಬಸವಣ್ಣನವರ ಚಿಂತನೆ ನಿಜಕ್ಕೂ ಮನುಕುಲಕ್ಕೆ ಅಗಮ್ಯವಾಗಿದೆ. ಮನುಕುಲ ಈ ಧರೆಯಲ್ಲಿ ಯಾವ ರೀತಿ ಜೀವಿಸಬೇಕು ಎಂಬುದಕ್ಕೆ ತಮ್ಮ ಅರಾಧ್ಯದೈವ ಕೂಡಲ ಸಂಗಮನ ಅಂಕಿತ ನಾಮದೊಂದಿಗೆ ಜೀವನದ ಮೌಲ್ಯಗಳನ್ನು ವಚನಗಳ ಮೂಲಕ ಜಗತ್ತಿಗೆ ನೀಡಿದ್ದಾರೆ.
ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ,
ಮುನಿಯ ಬೇಡ , ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳೆಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ
ಎನ್ನುವ ವಚನವು ೧) ಕಳಬೇಡ, ೨) ಕೊಲಬೇಡ, ೩) ಹುಸಿಯ ನುಡಿಯಲು ಬೇಡ, ೪) ಮುನಿಯ ಬೇಡ, ೫) ಅನ್ಯರಿಗೆ ಅಸಹ್ಯ ಪಡಬೇಡ, ೬) ತನ್ನ ಬಣ್ಣಿಸಬೇಡ, ೭) ಇದಿರು ಹಳೆಯಲು ಬೇಡ. ಏಳು ಸೂತ್ರಗಳನ್ನು ಒಳಗೊಂಡಿವೆ.
ಈ ಎಲ್ಲ ತತ್ವವನ್ನು ಒಬ್ಬ ಮಾನವ ತನ್ನ ಜೀವನದಲ್ಲಿ ಮೌಲ್ಯಗಳನ್ನಾಗಿ ಅಳವಡಿಸಿಕೊಂಡಾಗ ಮಾತ್ರ ಆತ ಮಹಾಮಾನವ ಅಥವಾ ಶರಣನಾಗುತ್ತಾನೆ.
ಕೊಲ್ಲುವವನೇ ಮಾದಿಗ, ಹೊಲಸು ತಿನ್ನುವವನೇ ಹೊಲೆಯ
ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸ ಬಯಸುವವನೇ ಕುಲಜ
ನಮ್ಮ ಕೂಡಲ ಸಂಗಮದೇವಾ.
ನೀನೊಲಿದರೆ ಕೊರಡು ಕೊನರುವದಯ್ಯಾ
ಬರಡು ಹಯನುಹುದಯ್ಯಾ|
ವಿಷವು ಅಮೃತವಹುದಯ್ಯಾ|
ನೋನೊಲಿದರೆ ಸಕಲ ಪಡಿಪದಾರ್ಥ ದೊರಕುವದಯ್ಯಾ.
ಎಂದು ಕೂಡಲ ಸಂಗಯ್ಯನಲ್ಲಿ ಬೇಡಿಕೊಳ್ಳುತ್ತ ಸಮಾಜವನ್ನು ಸರಿದಾರಿಯಲ್ಲಿ ತಂದು ಜಾತಿಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹನ್ನೆರಡನೇ ಶತಮಾನದಲ್ಲಿಯೇ ಅಂತರ್ಜಾತಿಯ ವಿವಾಹಗಳನ್ನು ಏರ್ಪಡಿಸಿದ್ದಾರೆ. ಶ್ರಾವಣ ಶುದ್ಧ ಪಂಚಮಿ ಕ್ರಿ. ಶ. ೦೨.೦೭.೧೧೯೬ ರಂದು ಪರಮಾತ್ಮನಲ್ಲಿ ಲೀನವಾದರು. ಎಂಟುವರೆ ಶತಮಾನಗಳು ಗತಿಸಿದರೂ ಕೂಡ ಇಂದಿಗೂ ಬಸವಣ್ಣವರು ವಚನಗಳು ಪ್ರಸ್ತುತವಾಗಿವೆ.
೧೨ ನೇ ಶತಮಾನದಲ್ಲಿಯೇ ಗ್ರಾಮಗಳಲ್ಲಿ ವಾಸಿಸಿ, ಅಲ್ಲಿಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಬಸವಣ್ಣನವರು ಸಮಾಜದ ಕೆಳ ವರ್ಗಗಳ ಮನೆಗಳಲ್ಲಿಯೇ ಸಾಮೂಹಿಕ ಪ್ರಸಾದವನ್ನು ಸ್ವೀಕರಿಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸಿದವರು. ಉದ್ಯೋಗಗಳನ್ನು ಸೃಷ್ಟಿಸಿ ಅವರಿಗೆ ಸರಿಯಾದ ವೇತನಗಳನ್ನು ನೀಡಿ, ವೃತ್ತಿ ಗೌರವವನ್ನು ಕಲ್ಪಿಸಿದ ಬಸವಣ್ಣನವರು ಎಲ್ಲರಿಗೂ ಆಚಾರ-ವಿಚಾರ-ಅನುಭಾವಗಳ ಮೂಲಕ ಜಾಗೃತಿ ಮೂಡಿಸಿದವರು.
ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಎಂಬ ಎಂಟು ಅಷ್ಟಾವರ್ಣಗಳ ಮೂಲಕ ಪ್ರತಿಯೊಬ್ಬರು ತಮ್ಮ ಜೀವನದ ಸಫಲತೆಯನ್ನು ಪಡೆಯುವರು ಎಂಬುದನ್ನು ತೋರಿಸಿದ ಶರಣರ ಜೀವನವನ್ನು ಅನುಕರಿಸಿಕೊಳ್ಳೋಣ. ಮನುಕುಲದ ಶ್ರೇಯಸ್ಸಿಗಾಗಿ ಹಾಗೂ ಜಾತಿಗಳ ಮಧ್ಯ ಸಂಘರ್ಷಗಳ ತೊರೆಯೋಣ. ತಮ್ಮ ವಚನಗಳ ಮೂಲಕ ಹಗಲಿರಳು ಶ್ರಮಿಸಿದ ಭಕ್ತಿ ಭಂಡಾರಿ ಬಸವಣ್ಣನವರ ನೆನಪಿಗಾಗಿ ಬಸವ ಜಯಂತಿಯ ಆಚರಣೆ ಮಾಡುತ್ತಿದ್ದು, ಇವತ್ತಿನ ಪೀಳಿಗೆಯವರು ನೈಜವಾಗಿ ಬಸವ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದ ಯಾವುದೇ ಸಮಸ್ಯೆಗಳು ಉಲ್ಬಣಗೊಳ್ಳಲಾರವು. ಇಂತಹ ಮಹಾನ್ ದಾರ್ಶನಿಕ ಬಸವಣ್ಣನವರ ವಿಚಾರಗಳನ್ನು ಆಚರಣೆಗೆ ತರುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
ಬಸವಣ್ಣನವರು ೧೪೨೬ ಕ್ಕೂ ಹೆಚ್ಚು ವಚನಗಳನ್ನು ಸಂಗ್ರಹಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಅವರ ಸರಳ ಮತ್ತು ಸಹಜ ವಚನಗಳು ಬದುಕಿಗೆ ದಾರಿದೀಪವಾಗಿವೆ. ಕಾಯಕ ಮತ್ತು ದಾಸೋಹದ ಮೂಲಕ ಬಸವಣ್ಣನವರು ರಾಜ್ಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞಾರಾಗಿ, ಮನೋವಿಜ್ಞಾನಿಯಾಗಿ, ಸಮಾಜಶಾಸ್ತ್ರಜ್ಞರಾಗಿ ತಮ್ಮ ಜೀವನ ಮತ್ತು ವಚನಗಳ ಮೂಲಕ ಬೆಳಕು ನೀಡಿದ್ದು, ಅವರ ಸಂದೇಶಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ನಿಮ್ಮ ಕಾಮೆಂಟ್ ಬರೆಯಿರಿ