ಕರ್ನಾಟಕಕ್ಕೆ 1400 ಮೆಟ್ರಿಕ್ ಟನ್ ಆಮ್ಲಜನಕ ನಿಗದಿಗೆ ಕೇಂದ್ರಕ್ಕೆ ಮನವಿ:ಶೆಟ್ಟರ

ಹುಬ್ಬಳ್ಳಿ: ಕೇಂದ್ರ ಸರ್ಕಾರ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಮ್ಲಜನಕ ನಿಗದಿ ಮಾಡಿದೆ. ಇದನ್ನು 1400 ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತು ಪತ್ರವನ್ನು ಸಹ ಬರೆಯಲಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ಆವರಣದಲ್ಲಿ ರಾಜ್ಯದ ಆಮ್ಲಜನಕ ಸರಬರಾಜು ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರ ಹಂತ ಹಂತವಾಗಿ ರಾಜ್ಯದ ಆಮ್ಲಜನಕದ ನಿಗದಿ ಪ್ರಮಾಣ ಹೆಚ್ಚಿಸುತ್ತಾ ಬಂದಿದೆ. 965 ಮೆಟ್ರಿಕ್ ಟನ್ ಇದ್ದ ಪ್ರಮಾಣವನ್ನು ಈಗ 1015ಕ್ಕೆ ಏರಿಸಿದೆ. ರಾಜ್ಯಕ್ಕೆ ಒರಿಸ್ಸಾ ಹಾಗೂ ಜಾರ್ಖಂಡ್‌ನ ಜೇಮ್‌ಷಡ್ಜಿಪುರದಿಂದ ಆಮ್ಲಜನಕ ಸರಬರಾಜು ಆಗುತ್ತಿದೆ. ರಾಜ್ಯದಲ್ಲಿ ಜಿಂದಾಲ್ ಸೇರಿದಂತೆ ಹಲವು ಕಡೆ 1100 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಈ ಆಮ್ಲಜನಕ ನೆರೆಯ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ಬದಲು ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ರಾಜ್ಯದಲ್ಲಿಯೇ ಬಳಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಇದಕ್ಕೂ ಅನುಮತಿ ನೀಡಲಿದೆ ಎಂದರು.
ಮೇ 11 ರಂದು ಜೇಮಷಡ್ಜಿಪುರದಿಂದ ಹೊರಟಿದ್ದ 120 ಮೆಟ್ರಿಕ್ ಟನ್ ಆಮ್ಲಜನಕ 6 ಟ್ಯಾಂಕರ್‌ಗಳು ರಾಜ್ಯಕ್ಕೆ ಬಂದು ತಲುಪಿವೆ. ಬೆಹರೈನ್‌ ಮತ್ತು ಕುವೈತ್‌ನಿಂದ ಹಡಗಿನ ಮೂಲಕ ಆಗಮಿಸಿದ 180 ಮೆಟ್ರಿಕ್ ಟನ್ ಆಮ್ಲಜನಕ ಸಹ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದೆ. ಇನ್ನೂ 6 ರಿಂದ 8 ಟ್ಯಾಂಕರ್ ಆಮ್ಲಜನಕ ರಾಜ್ಯಕ್ಕೆ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಮೇ 16 ರಂದು ಐ.ಎಸ್.ಓ ಕಂಟೇನರ್ ಟ್ಯಾಂಕ್ ರಾಜ್ಯಕ್ಕೆ ಬರಲಿದ್ದು, ಇದನ್ನು ಹುಬ್ಬಳ್ಳಿ-ಧಾರವಾಡಕ್ಕೆ ನೀಡಲಾಗುವುದು. ಇದರಿಂದ ಬಳ್ಳಾರಿಯಿಂದ ಆಮ್ಲಜನಕ ತರಲು ಅನುಕೂಲವಾಗಲಿದೆ. ಆಮ್ಲಜನಕ ಸರಬರಾಜು ಮೇಲುಸ್ತುವಾರಿಗಾಗಿ ಐವರು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ದಿನದ 24 ಗಂಟೆಯೂ ಆಮ್ಲನಕದ ಸರಬರಾಜ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement