ಮಂಗಳೂರು/ಕಾರವಾರ/ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ತೌಕ್ಟೆ ಚಂಡಮಾರುತದ ಪರಿಣಾಮ ರಾಜ್ಯ ಹಲವು ಕಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮುದ್ರ ತೀರದಲ್ಲಿ ನೀರು ಒಳ ನುಗ್ಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಚಂಡಮಾರುತದ ಗಾಳಿ ವೇಗಕ್ಕೆ ಸಮುದ್ರದ ನೀರು ಒಳನುಗ್ಗಿದ ಪರಿಣಾಮ ಮಂಗಳೂರು ಹೊರವಲಯದ ಸೋಮೇಶ್ವರ ಕಡಲತೀರದ ಹಿಂದೂ ರುದ್ರಭೂಮಿ ಸಮುದ್ರಪಾಲಾಗಿದೆ. ಶುಕ್ರವಾರ ಸಮುದ್ರದ ಅಲೆಗಳ ಅಬ್ಬರಕ್ಕೆ ಸ್ಮಶಾನದ ತಡೆಗೋಡೆ ಕುಸಿದಿತ್ತು. ಆದರೆ ಶನಿವಾರ ಸಮುದ್ರ ಗಾಳಿಯ ರಭಸಕ್ಕೆ ಅಸಮುದ್ರ ಉಕ್ಕಿ ಸಂಪೂರ್ಣ ಜಲಾವೃತವಾಗಿದೆ. ಸದ್ಯ ಮೊಬೈಲ್ ಕ್ಯಾಮಾರದಲ್ಲಿ ಸೆರೆಹಿಡಿದ ಸ್ಮಶಾನದ ಗೊಡೆ ಕುಸಿತದ ವಿಡಿಯೋ ವೈರಲ್ ಆಗಿದೆ.
ಮುಳುಗಿದ ಮಲ್ಪೆ ಸಮುದ್ರ ಪ್ರದೇಶ:
ಉಡುಪಿಯ ಮಲ್ಪೆ ಬೀಚ್ ಸುತ್ತಮುತ್ತಲೂ ಆತಂಕ ಸೃಷ್ಟಿಯಾಗಿದ್ದು, ಮೀನುಗಾರಿಕಾ ರಸ್ತೆಯನ್ನು ದಾಟಿ ಕಡಲ ಅಲೆಗಳು ಮೇಲೆ ಬರುತ್ತಿವೆ. ಹೀಗಾಗಿ ಕ್ರೇನ್ ಸಹಾಯದಿಂದ ಮೀನುಗಾರಿಕಾ ಬೋಟ್ ಅನ್ನು ಮೀನುಗಾರರು ಸ್ಥಳಾಂತರಿಸುತ್ತಿದ್ದಾರೆ. ಕಡಲ್ಕೊರೆತ ತಡೆಯಲು ಹಾಕಿದ್ದ ಕಲ್ಲುಗಳು ಕೂಡ ಸಮುದ್ರಪಾಲಾಗಿದ್ದು, ಕಡಲಬ್ಬರ ಮುಂದಿನ ಎರಡು ದಿನಗಳ ಕಾಲ ಹೀಗೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.ಮಲ್ಪೆ–ಪಡುಕೆರೆ ನಿವಾಸಿಗಳನ್ನು ಸ್ಥಳಾಂತರ ಮಾಡುವ ಚಿಂತನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಘುಪತಿ ಭಟ್ ಭೇಟಿ ನೀಡಿದ್ದಾರೆ. ಸಂಜೆಯ ನಂತರ ನೀರಿನ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಕಾಳಜಿ ಕೇಂದ್ರ ಆರಂಭ ಮಾಡಿ, ತೀರದ ನಿವಾಸಿಗಳ ಸ್ಥಳಾಂತರಕ್ಕೆ ಮನವೊಲಿಕೆ ಮಾಡಲಾಗುತ್ತಿದೆ.
ಒಳನುಗ್ಗಿದ ಉತ್ತರಕನ್ನಡ ತೀರದ ಸಮುದ್ರ..:
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾದ, ಅಂಕೋಲಾ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಕುಮಟಾ ತಾಲೂಕಿನ ಸಮುದ್ರ ತೀರದಲ್ಲಿ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಕುಮಟಾದ ಬಾಡ, ಅಘನಾಶಿನಿ, ಹೊಲನಗದ್ದೆ, ಕುಮಟಾ ಹಳೆ ಬಂದರು ಮೊದಲಾದ ಪ್ರದೇಶಗಳ ಮನೆಗಳಿಗೆ ಸಮುದ್ರದ ನೀರು ನುಗ್ಗಿದ ವರದಿಯಾಗಿದೆ. ಅಂಕೋಲಾ ಭಾಗದ ಹಲವು ಮನೆಗಳ ಸುತ್ತಲೂ ನೀರು ನಿಂತಿದ್ದು, ಬೋಟ್ಗಳನ್ನು ಸುರಕ್ಷಿತ ಭಾಗಕ್ಕೆ ಮೀನುಗಾರರು ಒಯ್ಯುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ