ಹಾಸನ: ಕೊರೊನಾ ಸೋಂಕು ದೃಢಪಟ್ಟಿದಕ್ಕೆ ಹೆದರಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದಿದೆ. ಕೆ.ಆರ್.ನಗರದ ಕೋಗಿಲೂರು ಗ್ರಾಮದ ಲೋಕೇಶ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಲೋಕೇಶ್ ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರಿಂದ ಅವರು ತೀವ್ರ ಆತಂಕಕ್ಕೊಳಗಾಗಿದ್ದರು. ಹೀಗಾಗಿ ಕೋವಿಡ್ ವಾರ್ ರೂಂನಿಂದ ಕರೆ ಮಾಡಿ ಅವರಿಗೆ ಧೈರ್ಯ ತುಂಬಲಾಗಿತ್ತು ಎಂದು ಹೇಳಲಾಗಿದೆ. ಜೊತೆಗೆ ಕುಟುಂಬಸ್ಥರೂ ಕೂಡ ಹೆದರದಂತೆ ಅವರಿಗೆ ದೈರ್ಯ ತುಂಬಿದ್ದರು.
ಆದರೆ ಎರಡು ದಿನಗಳ ಹಿಂದೆ ಹೆಂಡತಿ ಮನೆಗೆ ಹೋಗಿ ಬರುವುದಾಗಿ ಹೋಗಿದ್ದ ಲೋಕೇಶ್ ನಾಪತ್ತೆಯಾಗಿದ್ದರು. ಅರಕಲಗೂಡಿನ ನದಿ ಬಳಿ ಬೈಕ್ ಹಾಗೂ ಅವರ ಮೊಬೈಲ್ ಸಿಕ್ಕಿದ್ದವು. ಎರಡು ದಿನದ ಬಳಿಕ ಕೇರಳಪುರದ ಕಾವೇರಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರಿಗೆ ಒಂದುವರ್ಷದ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ