ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಮ್ಲಜನಕ ಇಲ್ಲೇ ಬಳಸಲು ಕೇಂದ್ರದಿಂದ ತಾತ್ವಿಕ ಒಪ್ಪಿಗೆ

ಬೆಂಗಳೂರು: ಕರ್ನಾಟಕದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರಾದ ಪಿಯೂಶ್‌ ಗೋಯೆಲ್‌, ಪ್ರಹ್ಲಾದ್‌ ಜೋಶಿ ಹಾಗೂ ಸದಾನಂದಗೌಡ ಅವರೊಂದಿಗೆ ಹಲವಾರು ಹಂತದಲ್ಲಿ ಮಾತುಕತೆ ನಡೆಸಿದ್ದೇವೆ.
ಅಲ್ಲದೆ, ಹಲವಾರು ಪತ್ರಗಳನ್ನು ಬರೆಯಲಾಗಿತ್ತು. ಈ ಸಮಾಲೋಚನೆಗೆ ಫಲ ದೊರೆತಿದೆ. ಇದಕ್ಕೆ ಕೇಂದ್ರ ತಾತ್ವಿಕ ಒಪ್ಪಿಗೆಯನ್ನು ನೀಡಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದರು.
ಕೇಂದ್ರ ಸರ್ಕಾರ ಬಹ್ರೇನ್‌ ಮತ್ತು ಕುವೈತ್‌ ನಿಂದ 180 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, ರೈಲು ಮೂಲಕ ಮೇ 11 ರಂದು ಜಮ್‌ಶೇಡ್‌ಪುರದಿಂದ 120 ಎಂ.ಟಿ, ಮೇ 15 ರಂದು ಕಳಿಂಗ ನಗರದಿಂದ 180 ಎಂ.ಟಿ ಆಮ್ಲಜನಕ ಸರಬರಾಜು ಆಗಿದೆ.
ಮುಂದಿನ ಒಂದು ವಾರದಲ್ಲಿ ಸುಮಾರು 320 ಟನ್‌ ದ್ರವೀಕೃತ ಆಮ್ಲಜನಕ ರವಾನೆಯಾಗುವ ನಿರೀಕ್ಷೆ ಇದೆ. 200 ಸಿಲಿಂಡರ್‌ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ರಾಜ್ಯದಿಂದ ತೆಲಂಗಾಣಕ್ಕೆ ರವಾನೆ 145 ಎಂ.ಟಿ, ಆಂಧ್ರಪ್ರದೇಶಕ್ಕೆ 63 ಎಂ.ಟಿ ಮತ್ತು ಮಹರಾಷ್ಟ್ರಕ್ಕೆ 40 ಎಂ.ಟಿಗಳಷ್ಟು ರವಾನೆ ಮಾಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರೀಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ 1400 ರಿಂದ 1700 ಮೆಟ್ರಿಕ್‌ ಟನ್‌ಗಳಷ್ಟು ಆಮ್ಲಜನಕದ ಅವಶ್ಯಕತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ 7 ದಿನಗಳಲ್ಲಿ ಸರಾಸರಿ 880 ಮೆಟ್ರಿಕ್‌ ಟನ್‌ನಷ್ಟು ಬಳಕೆ ಆಗುತ್ತಿದೆ. ಅಲ್ಲದೆ, ನಿನ್ನೆ 66.7 ಮೆಟ್ರಿಕ್‌ ಟನ್‌ ಕೊರತೆಯೂ ಕಂಡುಬಂದಿದೆ ಎಂದರು.
ಉತ್ಪಾದನೆ ಹೆಚ್ಚಿಸಲು ಕ್ರಮಗಳು:
ರಾಜ್ಯದಲ್ಲಿ ನೈಟ್ರೋಜನ್‌ ಪಿಎಸ್‌ಎ ಉತ್ಪಾದನಾ ಘಟಕಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋಲಾರ ಮತ್ತು ಯಾದಗಿರಿ ಜಿಲ್ಲೆಯಲ್ಲಿ 1000 ಎಲ್‌ಪಿಎಂ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗಿದೆ.
ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕಾರ್ಯವನ್ನು ನಡೆಸಲಾಗುತ್ತಿದೆ. ರಾಯಚೂರಿನ ಕೆಪಿಸಿಎಲ್‌ ಬಾಟ್ಲಿಂಗ್‌ ಆಕ್ಸಿಜನ್‌ ಪ್ಲಾಂಟ್‌ ಹಾಗೂ ವಿಐಎಸ್‌ಎಲ್‌ ಗೆ ಅಗತ್ಯವಿರುವ ಕಂಪ್ರೆಸ್ಸರ್‌ ನ್ನು ಖರೀದಿಸುವ ಕೆಲಸ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement