ಖಾಸಗಿ ಅನುದಾನರಹಿತ ಶಾಲೆ – ಕಾಲೇಜು ಶಿಕ್ಷಕ-ಸಿಬ್ಬಂದಿಗೂ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಲು ಹೊರಟ್ಟಿ ಒತ್ತಾಯ

ಹುಬ್ಬಳ್ಳಿ: ಸರ್ಕಾರ ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ವಿದ್ಯುತ್ ಚಾಲಿತ ಮಗ್ಗಗಳ ಕಾರ್ಮಿಕರು ಮೊದಲಾದವರಿಗೆ ಆರ್ಥಿಕ ನೆರವು ನೀಡಿದೆ. ಅದೇರೀತಿ ಖಾಸಗಿ ಅನುದಾನರಹಿತ ಶಾಲೆ ಮತ್ತು ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರಿಗೂ
ಸರ್ಕಾರ ಆರ್ಥಿಕ ನೇರವು ನೀಡುವ ಮೂಲಕ ಸ್ಪಂದಿಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆಪತ್ರ ಬರೆದಿರುವ ಅವರು, ಸರ್ಕಾರ ೧೨೫೦ ರೂ. ಕೋಟಿ ಪ್ಯಾಕೇಜ್ ಘೋಷಿಸಿರುವುದು ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಮಾಧಾನ ತಂದಿದ್ದು ಅದನ್ನು ಸ್ವಾಗತಿಸುತ್ತೇನೆ. ಸಣ್ಣ ವ್ಯಾಪಾರಸ್ಥರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು ಮೊದಲಾದವರಿಗೆ ಈ ಪ್ಯಾಕೇಜ್ ಆಶಾಕಿರಣವಾಗಿದೆ. ಆದರೆ ಸಮಾಜದಲ್ಲಿ ಪವಿತ್ರ ವೃತ್ತಿ ಎಂದು ಪರಿಗಣಿಸಲ್ಪಡುವ ಶಿಕ್ಷಕ ಸಮುದಾಯಕ್ಕೆ ಅಂದರೆ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳಲ್ಲಿನ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮಾತ್ರ ತಾವು ಘೋಷಿಸಿರುವ ಪ್ಯಾಕೇಜ್‌ನಲ್ಲಿ ಯಾವುದೇ ಅನುಕಂಪ, ಸಹಾನುಭೂತಿ ಕಾಣದಿರುವುದನ್ನು ನಾನು ತುಂಬಾ ನೋವಿನಿಂದ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಹ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವುದು ನಮ್ಮೆಲ್ಲರ ಗಮನದಲ್ಲಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಕೊರೊನಾ ಕಾರಣದಿಂದ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಇವರು ವೇತನವಿಲ್ಲದೆ ಅಭದ್ರತೆಯಲ್ಲಿ ನರಳುತ್ತಿದ್ದಾರೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಬಹುತೇಕ ಶಿಕ್ಷಕರಿಗೆ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಸಂಬಳವಿಲ್ಲ. ಇದರಿಂದಾಗಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಕ್ಕೂ ಹೆಚ್ಚು ಶಿಕ್ಷಕರು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈಗ ಲಾಕ್‌ಡೌನ್‌ನಿಂದ ಶಾಲೆಗಳು ಮುಚ್ಚಿದ್ದು ಮತ್ತೆ ಆ ಶಿಕ್ಷಕರು ಉದ್ಯೋಗವಿಲ್ಲದೇ ಹಲವು ಶಿಕ್ಷಕರು ಹೊಟ್ಟೆ ಹೊರೆಯಲು ತರಕಾರಿ, ಕಾಳು, ಹಣ್ಣು ಹಂಪಲ ಮಾರಾಟ ಮಾಡುವ ಅನಿವಾರ್ಯತೆಯಲ್ಲಿದ್ದರೆ ಇನ್ನೂ ಕೆಲವರು ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಗಳಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ಬಂದಿದ್ದು ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಶಿಕ್ಷಕರು ಸರ್ಕಾರಿ, ಅನುದಾನಿತ ಅಥವಾ ಅನುದಾನ ರಹಿತ ಯಾರೇ ಆಗಿರಲಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವದು ಎಲ್ಲಾ ಸರಕಾರಗಳ ಆದ್ಯ ಕರ್ತವ್ಯ.
ಆದರೆ ಶಿಕ್ಷಕರನ್ನೂ ಈ ವ್ಯಾಪ್ತಿಯಲ್ಲಿ ಸೇರಿಸದೇ ಇರುವುದು ಅವರಿಗೆ ಅನ್ಯಾಯವೆಸಗಿದಂತಾಗುತ್ತದೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರೂ ಸಹ ಈ ಬಗ್ಗೆ ಗಮನ ಹರಿಸಬೇಕೆನ್ನುವುದು ನನ್ನ ಆಗ್ರಹಪೂರ್ವಕ ಒತ್ತಾಯವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಕೊರೊನಾ ಭೀತಿಯಿಂದ ಮಕ್ಕಳು ಶಾಲೆಗೆ ಬರದಿದ್ದರೆ ಪಾಲಕರು ಶುಲ್ಕ ಕೊಡುವುದಿಲ್ಲ. ಆನ್‌ಲೈನ್ ಪಾಠ ಸರಕಾರ ಪ್ರಾರಂಭಿಸಿದೆ. ಪಾಲಕರಿಗೆ ಫೀ ಕೊಡುವಂತೆ ಒತ್ತಾಯ ಮಾಡಬಾರದೆಂದು ಹೇಳಿರುವುದರಿಂದ ಆರ್ಥಿಕವಾಗಿ ಸಾಕಷ್ಟು ಸಮರ್ಥರಿದ್ದವರನ್ನೂ ಸಹ ಶಿಕ್ಷಣ ಸಂಸ್ಥೆಗಳು ಶುಲ್ಕ ಕೊಡುವಂತೆ ಒತ್ತಾಯಿಸುವಂತಿಲ್ಲ. ಒತ್ತಾಯಿಸಿದರೆ ದೂರು ಕೊಡುತ್ತಾರೆಂಬುದು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಹವಾಲು. ಒಂದು ತಿಂಗಳು ಅಥವಾ ಹೆಚ್ಚೆಂದರೆ ಎರಡು ತಿಂಗಳ ಸಂಬಳವನ್ನು ಆಡಳಿತ ಮಂಡಳಿಯವರು ಸಿಬ್ಬಂದಿಗೆ ಕೊಡಬಹುದು. ಅದರೂ ಸಹ ಕೆಲವು ಸಾಮಾನ್ಯ ಶಾಲೆಗಳಿಗೆ ಇದು ಕಷ್ಟದ ಕೆಲಸ. ಸರ್ಕಾರಕ್ಕೆ ಯಾವುದೂ ಕಷ್ಟವಲ್ಲ. ಸರ್ಕಾರ ಬಾಕಿ ಉಳಿಸಿಕೊಂಡಿರುವ ಆರ್.ಟಿಇ. ಶುಲ್ಕವನ್ನೂ ಪಾವತಿಸುತ್ತಿಲ್ಲ. ಬಾಕಿ ಪಾವತಿಗೆ ೭೦೦ ಕೋಟಿ ರೂಪಾಯಿ ಕಾಯ್ದಿರಿಸಲಾಗಿದ್ದರೂ ರಾಜ್ಯದ ವಿವಿಧ ಶಾಲೆಗಳಿಗೆ ಪಾವತಿಸಬೇಕಾದ ೬೦೦ ಕೋಟಿ ರೂ. ನೀಡುತ್ತಿಲ್ಲ.
ಆದ್ದರಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಪ್ರಮಾಣದಲ್ಲಿ ಸರ್ಕಾರದ ಆರ್ಥಿಕ ನೆರವು ನೀಡಲೇಬೇಕಾಗುತ್ತದೆ. ಆದ ಕಾರಣ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರಿಗೆ ತಕ್ಷಣವೇ ವಿಶೇಷ ಪ್ಯಾಕೇಜ್ ರೂಪದ ಮಾಸಿಕ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಸಭಾಪತಿ ಹೊರಟ್ಟಿ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement