ನೇಮಕವಾದ 2150 ವೈದ್ಯರಿಗೆ ಶೀಘ್ರವೇ ಸ್ಥಳ ನಿಯೋಜಿಸಿ ನೇಮಕಾತಿ ಆದೇಶ

ಹುಬ್ಬಳ್ಳಿ: ರಾಜ್ಯ ಸರ್ಕಾರದಿಂದ 2150 ವೈದ್ಯರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 780 ತಜ್ಞ ವೈದ್ಯರು ಇದ್ದಾರೆ. ಉಳಿದ ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಪದವಿ ಪಡೆದವರಾಗಿದ್ದಾರೆ. ಇವರೆಲ್ಲರಿಗೂ ಸ್ಥಳ ನಿಯೋಜನೆ ಮಾಡಿ ಕರ್ತವ್ಯ ಹಾಜರಾಗಲು ನೇಮಕಾತಿ ಆದೇಶ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ತಿಳಿಸಿದರು.
ಹುಬ್ಬಳ್ಳಿ ಇಂದಿರಾ ಗಾಜಿನ ಮನೆಯಲ್ಲಿ ಧಾರವಾಡ ಜಿಲ್ಲಾ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಗ್ರೂಪ್ ಎ ನಿಂದ ಗ್ರೂಪ್ ಸಿ ವರೆಗೆ ಕಾಯಂ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ಡಿ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೊಂಕು ಹರಡುತ್ತಿರುವುದು ಆತಂಕಾರಿ ವಿಚಾರ. ರಾಜ್ಯ ಸರ್ಕಾರ ಈ ಕಾರಣಕ್ಕಾಗಿ ಎಲ್ಲಾ ಗ್ರಾಮಗಳಲ್ಲಿ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ವರ್ಗಾಯಿಸಿ ಚಿಕಿತ್ಸೆ ನೀಡಲು ತಿರ್ಮಾನಿಸಿದೆ.
ಬ್ಲಾಕ್ ಫಂಗಸ್ ರೋಗ ಸಾಂಕ್ರಾಮಿಕವಲ್ಲ. ಜನರಿಗೆ ತಪ್ಪು ಮಾಹಿತಿ ಹೋಗುವುದು ಬೇಡ. ಕೇಂದ್ರ ಸರ್ಕಾರ ಶನಿವಾರ ಬ್ಲ್ಯಾಕ್‌ ಫಂಗಲ್ ಎಂಟಿ ಔಷಧವಾದ ಲಿಪೊಸೊಮಲ್ ಅ್ಯಂಫೋಟೆರಿಸನ್ ಬಿ 1450 ವೈಲ್‌ಗಳನ್ನು ನೀಡಿದೆ. ಕಿಮ್ಸ್‌ನಲ್ಲಿ 78 ಬ್ಲ್ಯಾಕ್‌ ಫಂಗಸ್ ನಿಂದ ಬಳಸುತ್ತಿರುವ ರೋಗಿಗಳಿಗೆ ಲಸಿಕೆ ಕಳುಹಿಸಿಕೊಡಲಾಗುವುದು. 6 ವಾರದ ಚಿಕಿತ್ಸೆಗೆ 40 ರಿಂದ 60 ವೈಲ್ ಆ್ಯಂಟಿ ಫಂಗಲ್ ಔಷಧ ಪ್ರತಿ ರೋಗಿಗೆ ಬೇಕಾಗುತ್ತದೆ. ಇದನ್ನು ಪೂರೈಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ‌ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ನಿರ್ದೇಶನದಂತೆ, ಧಾರವಾಡ ಜಿಲ್ಲೆಯಲ್ಲಿ ಕೇಂದ್ರೀಕೃತ ಆಮ್ಲಜನಕ ಬೆಡ್ ಹಂಚಿಕೆ ವ್ಯವಸ್ಥೆ ಜಾರಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಿಮ್ಸ್‌ನಲ್ಲಿ 125 ವೆಂಟಿಲೇಟರ್ ಕೋವಿಡ್ ರೋಗಿಗಳಿಗೆ ನಿಗದಿ ಮಾಡಲಾಗಿದೆ. ಸಾವಿರ ರೋಗಿಗಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ವೈದ್ಯರ ಸಂಪೂರ್ಣ ಸದ್ಬಬಳಕೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸದ್ಯ ಕೋವಿಡ್ ಲಕ್ಷಣ ಹೊಂದಿರುವ, ಸಾರಿ ಹಾಗೂ ಐ.ಎನ್.ಐ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಇದರಿಂದ ಕೋವಿಡ್ ಪಾಸಿಟಿವ್ ದರ ಶೇ.30 ರಷ್ಟಿದೆ. ಇದರ ಅರ್ಥ ಸಮುದಾಯದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.30 ರಷ್ಟು ಇದೆ ಎಂದಲ್ಲ ಎಂದು ತಿಳಿಸಿದರು.
ಧಾರವಾಡ ಜಿಲ್ಲಾ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ ಬೆಲ್ಲದ್, ಪ್ರದೀಪ್ ಶೆಟ್ಟರ್‌, ಅಮೃತ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement