
ಹುಬ್ಬಳ್ಳಿ/ಶಿಗ್ಗಾವಿ : ಇನ್ನು ಮುಂದೆ ಹೊರ ರಾಜ್ಯಗಳಿಂದ ಕರ್ನಾಟಕ ಪ್ರವೇಶ ಮಾಡಬೇಕೆಂದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ನಿಯಮವನ್ನು ಪರಿಪಾಲನೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೋಟ್..
ಗಡಿ ಪ್ರದೇಶಗಳಲ್ಲಿ ಕೆಲವರು ಒಳ ದಾರಿಗಳ ಮೂಲಕ ರಾಜ್ಯ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತಾರೆ. ಅಂಥ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಿ. ನಾಕಾಬಂದಿ ಮಾಡಿ. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದವರನ್ನು ಮಾತ್ರ ರಾಜ್ಯದೊಳಗೆ ಬಿಡುವಂತೆ ಸೂಚಿಸಲಾಗಿದೆ.
-ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಖಾತೆ

ಸಚಿವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದ ಮೇರೆಗೆ ರಾಜ್ಯದಲ್ಲಿ ವಿಸ್ತರಣೆ ಯಾಗಿರುವ ಲಾಕ್ಡೌನ್ ನ್ನು ಪರಿಣಾಮಕಾರಿ ಯಾಗಿ ಅನುಷ್ಠಾನ ಗೊಳಿಸಲು ಕಟ್ಟುನಿಟ್ಟಿನ ಕಾರ್ಯಾಚರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮೂರು- ನಾಲ್ಕು ದಿನಗಳ ಕಾಲ ನಿರಂತರವಾಗಿ ಲಾಕ್ಡೌನ್ ಮಾಡಲಾಗುತ್ತಿದೆ. ಕೋವಿಡ್ ಹರಡುವಿಕೆಯ ಚೈನ್ ಬ್ರೇಕ್ ಮಾಡುವ ಉದ್ದೇಶದಿಂದ ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಲಾಕ್ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಲವಾರು ನಿರ್ಬಂಧ ಹಾಕಲಾಗಿದೆ. ಎಲ್ಲ ಕಡೆ ಪೊಲೀಸ್ ನಾಕಾಬಂದಿ ಹಾಕಲಾಗಿದೆ. ವಿಶೇಷವಾಗಿ ಗಡಿ ಪ್ರದೇಶದಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗಡಿಜಿಲ್ಲೆಗಳ ಮೂಲಕ ಹೊರರಾಜ್ಯದವರು ಕರ್ನಾಟಕವನ್ನು ಪ್ರವೇಶ ಬೇಕೆಂದರೆ ಅವರು ಕೋವಿಡ್ ನೆಗೆಟಿವ್ ಟೆಸ್ಟ್ ರಿಪೋರ್ಟ್ ತೋರಿಸುವುದು ಕಡ್ಡಾಯ. ಇಲ್ಲದಿದ್ದರೆ ಯಾರನ್ನೂ ಕರ್ನಾಟಕದ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಈ ಸಂಬಂಧ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ಮಂಗಳೂರು, ಉಡುಪಿ ಗಡಿ ಜಿಲ್ಲೆಗಳಲ್ಲಿ ಹಾಗೂ ಆನೆಕಲ್ಲಿನಲ್ಲಿ ಕಠಿಣ ನಿರ್ಬಂಧ ಹೇರುವಂತೆ ಆದೇಶಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ