ಮಂಜೇಶ್ವರ: ದ್ವಿಭಾಷಾ ಸಂಗಮ ಭೂಮಿ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಎ.ಕೆ.ಎಂ ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಸೋಮವಾರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಆ ಮೂಲಕ ಗಡಿನಾಡ ಕನ್ನಡಿಗನೆಂಬ ಅಭಿಮಾನ ಮೂಡಿಸಿದ್ದು, ಕಾಸರಗೋಡು ಜಿಲ್ಲೆಯ ಬಹುಸಂಖ್ಯಾತ ಕನ್ನಡಿಗರ ಪ್ರತಿನಿಧಿಯಾಗಿ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭೌಗೋಳಿಕವಾಗಿ ಕಾಸರಗೋಡು ಜಿಲ್ಲೆ ಕೇರಳ ರಾಜ್ಯಕ್ಕೆ ಸೇರಿದ್ದರೂ ಅಲ್ಲಿ ಕನ್ನಡ ಮಾತನಾಡುವವರು ಹೆಚ್ಚಾಗಿದ್ದಾರೆ.
ಈ ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವುದರಿಂದ ಕನ್ನಡ ಭಾಷೆಯ ಪ್ರಭಾವ ಇಲ್ಲಿ ಹೆಚ್ಚು. ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರೂ ಕೂಡ ಇಲ್ಲಿನ ಜನರ ಕನ್ನಡ ಪ್ರೀತಿಗೇನು ಕೊರತೆಯಿಲ್ಲ. ಮಂಜೇಶ್ವರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರೇ ಇರುವುದರಿಂದ ಅಶ್ರಫ್ ಈ ಕ್ರಮವನ್ನು ಅನುಸರಿಸಿದ್ದು ಇವರ ಹಿಂದಿನ ಶಾಸಕರು ಸಹ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆ ಸಂಪ್ರದಾಯವನ್ನು ಅಶ್ರಫ್ ಮುಂದುವರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ