ಕೋವಿಡ್‌ ಪರೀಕ್ಷಾ ವರದಿ ವಿಳಂಬ: 40 ಲ್ಯಾಬ್‌ಗಳಿಗೆ ಸರ್ಕಾರದಿಂದ ದಂಡ..!

ಬೆಂಗಳೂರು: ಕೋವಿಡ್‌ ಪರೀಕ್ಷೆ ವರದಿಗಳನ್ನು ವಿಳಂಬ ಮಾಡಿದ ಸರಕಾರಿ ಮತ್ತು ಖಾಸಗಿ ಲ್ಯಾಬ್‌ಗಳಿಗೆ ರಾಜ್ಯ ಸರ್ಕಾರ ದಂಡ ವಿಧಿಸಿದೆ. ಸ್ಯಾಂಪಲ್‌ ಕಳಿಸಿಕೊಟ್ಟ 24 ಗಂಟೆಗಳ ಒಳಗಾಗಿ ರಿಸಲ್ಟ್‌ ಕೊಡದೆ, ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡದ ಕಾರಣಕ್ಕೆ ಪ್ರತೀ ಸ್ಯಾಂಪಲ್‌ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ.
ರಾಜ್ಯ ಕೋವಿಡ್‌ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಭೆಯ ನಂತರ ಉಪಮುಖ್ಯಮಂತ್ರಿಗಳು ಈ ಮಾಹಿತಿ ಹಂಚಿಕೊಂಡಿದ್ದಾರೆ.
24 ಗಂಟೆ ಒಳಗಾಗಿ ರಿಸಲ್ಟ್‌ ಕೊಡಬೇಕು ಎಂದು ಸರ್ಕಾರವು ಲ್ಯಾಬ್‌ಗಳಿಗೆ ಡೆಡ್‌ಲೈನ್‌ ವಿಧಿಸಿತ್ತು. ಆದರೆ, ಕೆಲ ಲ್ಯಾಬ್‌ಗಳು ಪರಿಸ್ಥಿತಿಯ ತೀವ್ರತೆ ಅರಿಯದೇ ನಿರ್ಲಕ್ಷ್ಯ ಮಾಡಿದ್ದು ಹೀಗಾಗಿ ದಂಡ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಮೇ 8ರಿಂದ ಜಾರಿಗೆ ಬರುವಂತೆ ದಂಡ ಕ್ರಮ ಕೈಗೊಳ್ಳಲಾಗಿದ್ದು, 3,034 ಸ್ಯಾಂಪಲ್‌ಗಳ ವರದಿ ನೀಡಲು ತಡ ಮಾಡಿದ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ 9 ಪ್ರಮುಖ ಲ್ಯಾಬ್‌ಗಳಿಗೆ 6,06,800 ರೂ. ಹಾಗೂ ಖಾಸಗಿ ವಲಯದ 31 ಲ್ಯಾಬ್‌ಗಳಿಂದ 7,069 ಸ್ಯಾಂಪಲ್‌ಗಳು ವಿಳಂಬವಾಗಿ ಬಂದಿದ್ದು, ಅವುಗಳಿಗೆ ಒಟ್ಟು 14,13,800 ರೂ. ದಂಡ ವಿಧಿಸಲಾಗಿದೆ.
ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡದೇ ಫಲಿತಾಂಶದ ವರದಿಗಳನ್ನು ಬಹಿರಂಗ ಮಾಡಿದ ಕಾರಣಕ್ಕಾಗಿ 5 ಲ್ಯಾಬ್‌ಗಳಿಗೆ ದಂಡ ವಿಧಿಸಿ ಮುಚ್ಚಿಸಲಾಗಿದೆ. ಜತೆಗೆ, ಇನ್ನೂ ಬಹಳ ವಿಳಂಬ ಮಾಡಿದ 41 ಲ್ಯಾಬ್‌ಗಳಿಗೆ ಶೋಕಾಸ್‌ ನೋಟೀಸ್ ಜಾರಿ ಮಾಡಲಾಗಿದೆ.
ಸ್ಯಾಂಪಲ್‌ ತಲುಪಿದ 24 ಗಂಟೆಯೊಳಗೆ ರಿಸಲ್ಟ್‌ ಕೊಡುವುದರ ಜತೆಗೆ, ಪಾಸಿಟೀವ್‌ ಬಂದವರ ಮಾಹಿತಿಯನ್ನು ಐಸಿಎಂಆರ್‌ ಪೋರ್ಟಲ್‌ಗೆ ಆಪ್‌ಲೋಡ್‌ ಮಾಡಬೇಕು. ಹೀಗೆ ಆಗದಿರುವುದರಿಂದ ಚಿಕಿತ್ಸೆ ತಡವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಲ್ಯಾಬ್‌ಗಳ ಇಂಥ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಲ್ಲಡೆ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆಮನೆಗೂ ತೆರಳಿ ರೋಗ ಲಕ್ಷಣಗಳಿದ್ದವರನ್ನು ಪರೀಕ್ಷೆ ಮಾಡಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಒಬ್ಬರಿಗೆ ಪಾಸಿಟಿವ್‌ ಬಂದರೆ ಪ್ರಾಥಮಿಕ ಹಂತದಲ್ಲಿ ಅವರ ಸಂಪರ್ಕಕ್ಕೆ ಬಂದ ಕನಿಷ್ಠ ನಾಲ್ವರನ್ನಾದರೂ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಸೋಂಕು ಕಂಡು ಬಂದರೆ ಅಂಥವರನ್ನು ಕೂಡಲೇ ಸ್ಥಳೀಯ ಕೋವಿಡ್‌ ಕೇರ್‌ಗಳಿಗೆ ಶಿಫ್ಟ್‌ ಮಾಡಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement