ಸರ್ಕಾರ ಪ್ಯಾಕೇಜ್ ಘೋಷಿಸಿ ಐದುದಿನವಾದರೂ ಆರಂಭವಾಗದ ಅರ್ಜಿ ಸಲ್ಲಿಕೆ ಪ್ರಕ್ರಿಯೆ..!

ಬೆಂಗಳೂರು: ಸಂಕಷ್ಟ ಕಾಲದಲ್ಲಿ ಹಲವು ವರ್ಗವರಿಗೆ ಪ್ಯಾಕೇಜ್ ಘೋಷಿಸಿರುವ ರಾಜ್ಯ ಸರ್ಕಾರ ಈವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವನ್ನೇ ನೀಡಿಲ್ಲ.
ಚಾಲಕರಿಂದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಅರ್ಜಿ ಸ್ವೀಕರಿಸಲಿದೆ. ಉಳಿದಂತೆ ಕ್ಷೌರಿಕರು, ಅಗಸರು, ಹಮಾಲಿಗಳು, ಅಕ್ಕಸಾಲಿಗರು, ಕುಂಬಾರರು, ಮೆಕ್ಯಾನಿಕಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು ಸೇರಿದಂತೆ ಇತರಿಂದ ಕಳೆದ ವರ್ಷ ಕಾರ್ಮಿಕ ಇಲಾಖೆ ಅರ್ಜಿ ಸ್ವೀಕರಿಸಿತ್ತು.
ಈ ವರ್ಷ ಪ್ಯಾಕೇಜ್ ಘೋಷಣೆ ಮಾಡಿ ಸುಮಾರು 3.04 ಲಕ್ಷ ಮಂದಿಗೆ ನೆರವು ನೀಡುವುದಾಗಿ ತಿಳಿಸಲಾಗಿದೆ. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿ ಐದು ದಿನಗಳಾಗಿವೆ. ಈವರೆಗೂ ಅರ್ಜಿ ಸಲ್ಲಿಕೆ ಚಾಲನೆ ಕಂಡಿಲ್ಲ. ಪ್ಯಾಕೇಜ್ ಘೋಷಣೆಯ ಬಳಿಕ ಎಲ್ಲಾ ಇಲಾಖೆಗಳು ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಸಾಫ್ಟವೇರ್ ಲಿಂಕ್ ಅಳವಡಿಲು ಮುಂದಾಗಿವೆ. ಅದರ ಕೆಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಈ ಸಂಜೆ ವರದಿ ಮಾಡಿದೆ.
ಅದು ಮುಗಿದು ಅರ್ಜಿ ಸಲ್ಲಿಕೆ ಆರಂಭವಾಗುವ ವೇಳೆಗೆ ಈ ತಿಂಗಳು ಕಳೆದಿರುತ್ತದೆ, ಅಲ್ಲಿಂದ ಅರ್ಜಿ ಸಲ್ಲಿಕೆಗೆ ಒಂದು ವಾರ ಕಾಲಾವಕಾಶ ನೀಡಲಾಗುತ್ತದೆ. ಅಷ್ಟರಲ್ಲಿ ಜೂನ್ 7 ಸಮೀಪಿಸಿರುತ್ತದೆ ಎಂದು ವರದಿ ಹೇಳಿದೆ.
ಜನ ಜೀವನ ಸಹಜ ಸ್ಥಿತಿಗೆ ಬಂದ ಮೇಲೆ ಫಲಾನುಭವಿಗಳು ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರ ಕೊಡುವ 2500, 3 ಸಾವಿರ ರೂಪಾಯಿಗೆ ಅರ್ಜಿ ಸಲ್ಲಿಸಿ ದಿನ ಗಟ್ಟಲೆ ಅಲೆಯುವವರ ಸಂಖ್ಯೆ ಕಡಿಮೆ. ಬೆರಳೆಣಿಕೆಯಷ್ಟು ಮಂದಿ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಉದ್ದೇಶ ಈಡೇರುವುದಿಲ್ಲ.
ಸ ಸಂಕಷ್ಟ ಇರುವುದು ಈಗ. ಘೋಷಿತ ಪ್ಯಾಕೇಜ್ ಮೊತ್ತ ಕಡಿಮೆ ಇದ್ದರೂ ಸರಿ, ಕನಿಷ್ಠ ಲಾಕ್ ಡೌನ್ ಸಂದರ್ಭದಲ್ಲಿ ಅದು ಕೈಗೆ ಸಿಗಬೇಕು. ಸಿಕ್ಕಿದ್ದರೆ ಎಷ್ಟೋ ಜನರು ಸಾಲಸೋಲ ಮಾಡುವುದ ತಪ್ಪುತ್ತಿತ್ತು. ಆದರೆ ಸರ್ಕಾರ ಆರ್ಥಿಕ ಪ್ಯಾಕೇಜ್‌ ಪಡೆಯಲು ಅರ್ಜಿ ಸ್ವೀಕಾರವನ್ನೇ ವಿಳಂಬ ಮಾಡಿದೆ.
ಕಳೆದ ವರ್ಷ ಪ್ಯಾಕೇಜ್ ಕೊಟ್ಟ ಅನುಭವ ಇರುವ ಸರ್ಕಾರ ಈ ವರ್ಷ ಆರ್ಥಿಕ ನೆರವು ಘೋಷಣೆ ಮಾಡುತ್ತಿದ್ದಂತೆ ತಕ್ಷಣವೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕಿತ್ತು. ಆದರೆ ಪ್ಯಾಕೇಜ್ ಘೋಷಣೆಯಾದ ಎರಡು ದಿನಗಳ ಬಳಿಕ ಆಯಾ ಇಲಾಖೆಗಳು ಅರ್ಜಿ ಸ್ವೀಕಾರದ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿಕೆ ನೀಡಿವೆ.
ಸರ್ಕಾರ ಸೇವಾ ಸಿಂಧು ವೆಬ್ ಫೋರ್ಟಲ್ ಮತ್ತು ಅಪ್ಲಿಕೇಷನ್ ಮೂಲಕ ಅರ್ಜಿ ಸ್ವೀಕರಿಸಲಿದೆ. ಸೇವಾ ಸಿಂಧು ಲಿಂಕ್ ಅನ್ನು ಸರ್ಕಾರದ ಬಹುತೇಕ ವೆಬ್ ಸೈಟ್ ಗಳಿಗೆ ಲಿಂಕ್ ಮಾಡಲಾಗಿದೆ. ಅದರಲ್ಲಿ ಜನ್ಮ ಪ್ರಮಾಣ ಪತ್ರದಿಂದ ಹಿಡಿದು ಮರಣದ ವರೆಗೆ, ಆಸ್ತಿ ದಾಖಲಾತಿಗಳಿಂದ ಹಿಡಿದು ದಿವಾಳಿ ಸರ್ಟಿಫಿಕೆಟ್ ವರೆಗೆ ಎಲ್ಲವನ್ನು ಅದರಲ್ಲಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಸುಮಾರು 67 ಪ್ರಮಾಣ ಸೇವೆಗಳು ಲಭ್ಯವಾಗಲಿವೆ ಎಂದು ಅಲ್ಲಿ ಲಿಂಕ್ ನೀಡಲಾಗಿದೆ. ನೀವು ಅದಕ್ಕೆ ಹೋಗಿ ಒಪನ್ ಮಾಡಿದರೆ ಅನಗತ್ಯವಾದ ಸೈಟ್ ಗಳು ತೆರೆದುಕೊಳ್ಳುತ್ತವೆ ಇಲ್ಲವೇ ಮತ್ತೇನೋ ಮೆಸೇಜ್ ಕಾಣಿಸುತ್ತದೆ ಎಂಬದು ಹಲವರ ದೂರು.
ಯಾವತ್ತೋ ಪ್ಯಾಕೇಜ್ ಹಣ ಸಿಗುವುದಾದರೆ ಸಂಕಷ್ಟ ಕಾಲದಲ್ಲಿ ಜನ ಬದುಕುವುದಾದರೂ ಹೇಗೆ. ಹೀಗಾದರೆ ಪ್ಯಾಕೇಜ್‌ ಘೋಷಿಸಿದ್ದರ ಉದ್ದೇಶವಾದರೂ ಎಂಬುದು ಸಾರ್ವಜನಿಕರ ಪ್ರಶ್ನೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement