ಕಾರಿದ್ದರೂ ಅಪಘಾತದಲ್ಲಿ ಗಾಯಗೊಂಡ ವೈದ್ಯರನ್ನು ಆಸ್ಪತ್ರೆಗೆ ಕರೆದೊಯ್ಯದ ಶಾಸಕ: ಆರೋಪ

ಚಿಕ್ಕಮಗಳೂರು: ಆರೋಗ್ಯ ಇಲಾಖೆಯ ವೈದ್ಯರೊಬ್ಬರು ಅಪಘಾತದಲ್ಲಿ ತೀವ್ರ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದರೆ ಆ ರಸ್ತೆಯಾಗಿ ಬಂದ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಗಾಯಾಳುವಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಗಾಯಾಳು ತುರ್ತು ಚಿಕಿತ್ಸೆ ಲಭಿಸದೆ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಬುಧವಾರ ಸಂಜೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಘಟನೆಯಲ್ಲಿ ಕೊರೊನಾ ಡ್ಯೂಟಿ ಮುಗಿಸಿ‌ ಬರುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದ್ದು ಅವರಿಗೆ ತೀವ್ರ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಟ ನಡೆಸುತ್ತಿದ್ದರು. ಆಗ ಅದೇ ದಾರಿಯಲ್ಲಿ ಬಂದ ತರೀಕೆರೆ ಶಾಸಕ‌ ಡಿ.ಎಸ್ ಸುರೇಶ್ ಕಾರಿನಿಂದ ಕೆಳಗಿಳಿಯದೇ ಸುಮ್ಮನಾಗಿದ್ದಾರೆ.
ಕೋವಿಡ್ ಯೋಧರಾಗಿರುವ ಹಿರಿಯ ಆರೋಗ್ಯಾಧಿಕಾರಿ ಡಾ.ರಮೇಶ್ ಕುಮಾರ್ ಮೃತಪಟ್ಟವರು. ಇವರು ಬುಧವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಬೈಕಿಗೆ ಲಕ್ಕವಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಅವರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಅದೇ ರಸ್ತೆಯಾಗಿ ಬಂದ ಶಾಸಕ‌ ಡಿ.ಎಸ್.ಸುರೇಶ್ ಅಪಘಾತವನ್ನು ಗಮನಿಸಿ ಘಟನಾ ಸ್ಥಳದಿಂದ ಸ್ವಲ್ಪ ದೂರ ತನ್ನ ಕಾರನ್ನು ನಿಲ್ಲಿಸಿದ್ದಾರೆ. ಆದರೆ ಅವರು ಕಾರಿನಿಂದ ಇಳಿದಿಲ್ಲ ಎನ್ನಲಾಗಿದೆ. ಬಳಿಕ ಶಾಸಕರ ಗನ್ ಮ್ಯಾನ್ ಕಾರಿನಿಂದ ಇಳಿದು ಆಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಅಪಘಾತ ನಡೆದು ಸುಮಾರು 20 ನಿಮಿಷಗಳ ಬಳಿಕ ಆಗಮಿಸಿದ ಆಯಂಬುಲೆನ್ಸ್ ನಲ್ಲಿ ವೈದ್ಯರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಶಾಸಕರು ಆಯಂಬುಲೆನ್ಸ್ ಗೆ ಕಾಯುವ ಬದಲು ತಮ್ಮ ಕಾರಿನಲ್ಲೇ ಗಾಯಾಳು ವೈದ್ಯರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ವೈದ್ಯರ ಪ್ರಾಣ ಉಳಿಯುತ್ತಿತ್ತು. ಆದರೆ ಶಾಸಕರು ಕಾರಿನಿಂದ ಹೊರಗಿಳಿಯದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಒಪ್ಪಿಗೆಯಿಲ್ಲದೆ ಖಾಸಗಿ ವೀಡಿಯೊ-ಫೋಟೊ ಶೇರ್ ಮಾಡಿದ್ರೆ ಎಫ್‌ಐಆರ್ : ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement