ಒಂದು ಡೋಸ್ ಕೊರೊನಾ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ 200 ರೂ. ಸೇವಾ ಶುಲ್ಕ ನಿಗದಿ ಮಾಡಿದ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಲಸಿಕೆಯ ವಿತರಿಸುವ ಖಾಸಗಿ ಆಸ್ಪತ್ರೆಗಳಲ್ಲಿ 200 ರೂಪಾಯಿ ಸೇವಾ ಶುಲ್ಕ ಮಾತ್ರ ವಿಧಿಸುವಂತೆ ಗುರುವಾರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕೊವಿಡ್-19 ಲಸಿಕೆ ಉತ್ಪಾದಕ ಕಂಪನಿಗಳು ಖಾಸಗಿ ಆಸ್ಪತ್ರೆಗಳಿಗೆ ನೀಡಿರುವ ಲಸಿಕೆ ದರದ ಮೇಲೆ ಸೇವಾಶುಲ್ಕ ವಿಧಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕರ್ನಾಟಕ ಸರ್ಕಾರವು ಆರಂಭದಲ್ಲಿ 100 ರೂಪಾಯಿ ಸೇವಾ ಶುಲ್ಕ ವಿಧಿಸುವುದಕ್ಕೆ ಮಾತ್ರ ಅನುಮತಿ ನೀಡಿತ್ತು.
ಒನ್‌ ಸೈಟ್‌(One Site) ಲಸಿಕೆ ನೀಡಲು ಬೂತ್ ತೆರೆಯಬೇಕು, ಲಸಿಕೆ ನೀಡುವುದಕ್ಕಾಗಿ ಸಾಕಷ್ಟು ಸ್ಥಳಾವಕಾಶವನ್ನು ಕಲ್ಪಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಬೇಕು ಹಾಗೂ ಲಸಿಕೆ ಖರೀದಿಸಲು ಮುಂಚಿತವಾಗಿ ಹಣ ಪಾವತಿಸಬೇಕಾದ ಹಿನ್ನೆಲೆ 300 ರೂಪಾಯಿ ಸೇವಾ ಶುಲ್ಕ ವಿಧಿಸುವುದಕ್ಕೆ ಅನುಮತಿ ನೀಡುವಂತೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಕೊರೊನಾವೈರಸ್ ಲಸಿಕೆ ವಿತರಣೆಗೆ ಮೊದಲ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರವು ಕ್ರಮ ತೆಗೆದುಕೊಂಡಿದೆ. ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ ಮನವಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ಪ್ರತಿ ಡೋಸ್ ಲಸಿಕೆ ವಿತರಣೆಗೆ 200 ರೂಪಾಯಿ ಸೇವಾ ಶುಲ್ಕವನ್ನು ವಿಧಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ನಿಗದಿತ ಸೇವಾ ಶುಲ್ಕಕ್ಕಿಂತ ಹೆಚ್ಚು ಮೊತ್ತವನ್ನು ಪಡೆದರೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement