ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅಲ್ಲಗಳೆದಿದ್ದಾರೆ.
ಯಶವಂತಪುರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಲಕ್ಷ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಮಾತನಾಡಿದ ಅವರು
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎಲ್ಲಿಯೂ ಚರ್ಚೆ ಆ ಬಗ್ಗೆ ಆಗಿಲ್ಲ, ಯಾವುದೇ ಬದಲಾವಣೆ ಕೂಡ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದಗಿನಿಂದ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸದ್ಯಕ್ಕೆ ಶಾಸಕಾಂಗ ಪಕ್ಷದ ಸಭೆ ಇಲ್ಲ, ಕೋವಿಡ್ ಮುಗಿಯುವ ತನಕ ಸಭೆಗಳನ್ನ ನಡೆಸುವುದಿಲ್ಲ ಎಂದು ತಿಳಿಸಿದರು.
ಸಿ.ಪಿ. ಯೋಗೇಶ್ವರ್ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ರಾಜ್ಯದಲ್ಲಿ ಶುದ್ಧ ಸರ್ಕಾರ ಇಲ್ಲ ಎಂಬ ಅವರ ಹೇಳಿಕೆ ಬಗ್ಗೆ ಕೂಡಲೇ ವಿವರಣೆ ಪಡೆಯುತ್ತೇನೆ ಎಂದ ಅವರು, ಮುಖ್ಯಮಂತ್ರಿ ಪುತ್ರರಿಂದ ಅಧಿಕಾರ ಹಸ್ತಕ್ಷೇಪದ ಆರೋಪದ ಬಗ್ಗೆಯೂ ವಿವರಣೆ ಪಡೆಯಲಾಗುವುದು ಎಂದು ತಿಳಿಸಿದರು.
ಈಗ ಕೋವಿಡ್ ಕೆಲಸ ಮಾತ್ರ ನಡೆಯುತ್ತಿದೆ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಲಾಗಿತ್ತು. ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬೇಕು, ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಭಿನ್ನಮತೀಯ ಶಾಸಕರಿಗೆ ಕಟೀಲು ಎಚ್ಚರಿಕೆ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ