ಕೆಎಟಿ ಆದೇಶ: ಶಿಕ್ಷಕರು ಆತಂಕ ಪಡುವುದು ಬೇಡ ಎಂದ ಶಿಕ್ಷಣ ಸಚಿವರು

ಬೆಂಗಳೂರು :ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ  (ಕೆಎಟಿ) ಆದೇಶವನ್ನು ವಿಸ್ತೃತವಾಗಿ ಗಮನಿಸಬೇಕಿದೆ ಎಂದು ಶಿಕ್ಷಣ‌ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೇಳಿಕೆ‌ಯನ್ನು ಬಿಡುಗಡೆ‌ ಮಾಡಿರುವ ಸಚಿವರು, ನ್ಯಾಯಾಲಯದ ತೀರ್ಪನ್ನು ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದ್ದು ಈ ಹಂತದಲ್ಲಿ ಯಾವುದೇ ಶಿಕ್ಷಕರೂ ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದು ಹೇಳಿದ್ದಾರೆ.

ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗೆ ನಿಗದಿ ಇರುವ ಅನುಪಾತದಂತೆ ಬಡ್ತಿ ಮುಖಾಂತರದಲ್ಲಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶವಿದೆ.
ಈವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಎಂದರೆ ಏಕ ರೂಪದಲ್ಲಿ ಇದ್ದ 1 ರಿಂದ 7 ನೇ ತರಗತಿ ಶಿಕ್ಷಕ ವೃಂದವಾಗಿತ್ತು. ರಾಷ್ಟ್ರ ವ್ಯಾಪಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ( ಎನ್.ಸಿ.ಟಿ.ಇ) ನಿಯಮಿಸುವ ಅಧಿಕಾರ ಹೊಂದಿದ್ದು ಈ ನಿಯಮಗಳಂತೆ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ 6ರಿಂದ 8ನೇ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕ ವೃಂದ ಹೊಂದಬೇಕಾಗಿರುತ್ತದೆ.
ಅದರಂತೆ 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕ 1 ರಿಂದ 7ನೇ ತರಗತಿಯ ಒಟ್ಟಾರೆ 188000 ವೃಂದ ಬಲದಲ್ಲಿಯೇ ಕಡಿತಗೊಳಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52000 ಬಲದ 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ.
ಆದರೆ ಮೂಲ ವೃಂದದಲ್ಲಿಯೂ ಪದವೀಧರ ವಿದ್ಯಾರ್ಹತೆಯುಳ್ಳ ಶಿಕ್ಷಕರು ಇದ್ದು ಅವರಿಗೆ 6 ರಿಂದ 8ನೇ ತರಗತಿ ವೃಂದಕ್ಕೆ ಪರೀಕ್ಷೆ ಮುಖಾಂತರದಲ್ಲಿ ಸೇರ್ಪಡೆಗೊಳ್ಳಲು ಈ ನಿಯಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಪ್ರೌಢಶಾಲಾ ಶಿಕ್ಷಕ ವೃಂದಕ್ಕೆ ಇರುವ ಬಡ್ತಿ ನಿಯಮಗಳಿಗೂ 1 ರಿಂದ 5 ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಮತ್ತು 6 ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದವರಿಗೆ ಆಯಾ ವೃಂದ ಬಲದ ಆಧಾರದಲ್ಲಿ ಬಡ್ತಿ ಪ್ರಮಾಣವನ್ನು ನಿರ್ಧರಿಸಬೇಕು. ಈ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಆದೇಶ ಹೊರಬಿದ್ದಿದೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯ ಆದೇಶದಲ್ಲಿಯೂ ವೃಂದ ನಿಯಮಗಳಿಗೆ ತಿದ್ದುಪಡಿ ತಂದು 1ರಿಂದ 5ನೇ ತರಗತಿ ವೃಂದದಲ್ಲಿ ಅರ್ಹರಿಗೆ ಬಡ್ತಿಗೆ ಅವಕಾಶ ನೀಡಬಹುದಾಗಿದೆ ಎಂಬುದಾಗಿ ಇದೆ. ಜಾರಿಯಲ್ಲಿರುವ ವೃಂದ ನಿಯಮಗಳಲ್ಲಿ 1ರಿಂದ 5 ಮತ್ತು 6 ರಿಂದ 8 ಎಂಬುದನ್ನು ಪ್ರಸ್ತಾಪಿಸಿರುವುದಿಲ್ಲವಾದ್ದರಿಂದ 6 ರಿಂದ 8 ವೃಂದದಿಂದ ಬಡ್ತಿ ಸೂಕ್ತ ಎಂಬುದಾಗಿ ಅದು ಅಭಿಪ್ರಾಯ ಪಟ್ಟಿದೆ. ಹಾಗಾಗಿ 1ರಿಂದ 5ನೇ ತರಗತಿ ವೃಂದ ಬಡ್ತಿಗಳ ಬಗ್ಗೆ ಪ್ರಶ್ನೆ ಎತ್ತಿದೆ.
ಇದು ತಾಂತ್ರಿಕವಾದ ವಿಷಯವಾಗಿದ್ದು 1967ರಿಂದಲೂ ವೃಂದ ನಿಯಮಗಳು ಜಾರಿ ಇದ್ದು 2017ರವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಪೂರ್ವದಲ್ಲಿ 1ರಿಂದ 7ನೇ ತರಗತಿ ಶಿಕ್ಷಕ ವೃಂದ ಮತ್ತು ಇದೀಗ 1ರಿಂದ 5ನೇ ತರಗತಿ ಶಿಕ್ಷಕ ವೃಂದ ಎಂದು ನಾಮಾಂಕನಗೊಂಡ ವೃಂದವೇ ಆಗಿದೆ. 2017ರ ನಂತರದಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಎಲ್ಲ ಕಾಲದ ಬಡ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಗಮನಿಸಬೇಕಾಗಿದೆ.
ಪ್ರಯುಕ್ತ, ಈ ಬಗ್ಗೆ ತುರ್ತಾಗಿ ಪರಿಶೀಲಿಸಿ ಕಾನೂನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನ್ಯಾಯಾಲಯದಲ್ಲಿಯೂ ಅಪೀಲು ಸಲ್ಲಿಸಿ ಈ ವಿಷಯವನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಮಾಧ್ಯಗಳಲ್ಲಿ ಬಂದ ವರದಿಗೆ ಯಾವ ಶಿಕ್ಷಕರೂ ಆತಂಕ ಪಡಬೇಕಾಗಿಲ್ಲ ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement