ಜಲಧಾರೆ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ, ಧಾರವಾಡ ಜಿಲ್ಲೆ 388 ಹಳ್ಳಿಗಳಿಗೆ ನೀರು:ಶೆಟ್ಟರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ 388 ಹಳ್ಳಿಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1032 ಕೋಟಿ ರೂ.ಗಳ ಯೋಜನೆ ಇದು. ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಅಡಿ  430.48 ಕೋಟಿ ರೂ., ರಾಜ್ಯ ಸರ್ಕಾರ 602 ಕೋಟಿ ರೂ.ಗಳ ಅನುದಾನ ನೀಡಿವೆ. ನಬಾರ್ಡ್ ನಿಂದ 423 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ ಎಂದು ಶೆಟ್ಟರ ಹೇಳಿದರು.
. ಜಿಲ್ಲೆಯ ಪ್ರತಿ ಗ್ರಾಮದ ಮನೆ ಮನೆಗೂ ನಳ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ಇದರ ಜೊತೆಗೆ 54 ಕೋಟಿ ರೂ.ಗಳ ಅಣ್ಣಿಗೇರಿ ಪಟ್ಟಣದ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶೀಘ್ರವೇ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸಚಿವ ಸಂಪುಟದಲ್ಲಿ ಏಳು ಜಿಲ್ಲೆಗಳ 9 ಸಾವಿರ ಕೋಟಿ ರೂ.ಗಳ ಜಲ ಜೀವನ್ ಮಿಷ್‌ನ್ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯ ಜಲಧಾರೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಶ್ರಮ ವಹಿಸಿದ್ದಾರೆ. ಶಾಸಕರಾದ ಶಂಕರ್ ಪಾಟೀಲ ಮುನೇಕೊಪ್ಪ, ಅಮೃತ ದೇಸಾಯಿ ವಿಸ್ತೃತ ಯೋಜನೆ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಚಿವ ಶೆಟ್ಟರ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಜಲಜೀವನ್ ಮಿಷ್‌ನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹರ್ ಘರ್ ನಲ್ ಜಲ್ ಯೋಜನೆ ಐತಿಹಾಸಿಕವಾಗಿದ್ದು ಇದಕ್ಕೆ 3.60 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. 2023 ಒಳಗಾಗಿ ದೇಶದ ಎಲ್ಲೆಡೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನರ್ಬಾಡ್ ಮತ್ತು ವಿಶ್ವಬ್ಯಾಂಕ್ ಯೋಜನೆ ಅನುಷ್ಠಾನಕ್ಕೆ ಕೈ ಜೋಡಿಸಿವೆ. ರಾಜ್ಯದಲ್ಲಿ ನರ್ಬಾಡ್ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡಲಿದೆ. ಜಲಧಾರೆ ಯೋಜನೆಗೆ ಆರಂಭಿಕ ಹಂತದಲ್ಲಿ ನೀಡಲಾದ ಅನುದಾನದಲ್ಲಿ ಪೈಪ್‌ಲೈನ್ ಅಳವಡಿಕೆ, ಒವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಜಲಧಾರೆ ಯೋಜನೆಗೆ ನೀರಾವರಿ ಇಲಾಖೆಯಿಂದ ಮಲಪ್ರಭಾ ನದಿ ನೀರಿನ ಹಂಚಿಕೆಯಾಗಿದೆ. ಕಳಸಾ ಬಂಡೂರಿ ಯೋಜನೆಯಿಂದಲೂ ನೀರು ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ ಉತ್ತರಿಸಿದರು.
ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಪತ್ರ ಬರೆದಿದೆ. ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ಇದ್ದು, ರಾಜ್ಯ ಮಟ್ಟದ ತಜ್ಞರ ವರದಿ ಆಧಾರಿಸಿ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವರು. ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ನಿಯಮಗಳನ್ನು ಜಾರಿ ಮಾಡಲಾಗಿದೆ. ಜಿಲ್ಲೆಯ ಕೋವಿಡ್ ಸೋಂಕಿನ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 16 ಕ್ಕೆ ಇಳಿಮುಖವಾಗಿದೆ. ಇದು ಶೇ.5 ರಷ್ಟು ಬಂದರೆ ಲಾಕ್‌ಡೌನ್ ನಿಂದ ಸಹಜ ಸ್ಥಿತಿಗೆ ಮರಳಲಾಗುವುದು. ಸದ್ಯ ಕೋವಿಡ್ ಮೊದಲ ಅಲೆಗಿಂತಲೂ ಹೆಚ್ಚಿನ ಮರಣ ದರವಿದೆ ಎಂದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement