ಉತ್ತರ ಪ್ರದೇಶದ ರಾಪ್ತಿ ನದಿಗೆ ಶವವನ್ನು ಎಸೆಯಲಾಗುತ್ತಿರುವ ವಿಡಿಯೋ ಹೊರಬಿದ್ದ ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೊದಲ್ಲಿ, ಮಳೆ ಬೀಳುತ್ತಿರುವಾಗ ಇಬ್ಬರು ಯುವಕರು ಸಿಸಾಯ್ ಘಾಟ್ನಲ್ಲಿರುವ ಸೇತುವೆಯಿಂದ ದೇಹವನ್ನು ನದಿಗೆ ಎಸೆಯುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಸೂಟ್ ಧರಿಸಿರುತ್ತಾರೆ.
ಬಲರಾಂಪುರದ ಕೊಟ್ವಾಲಿ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಸಲ ಹಂಚಿಕೊಳ್ಳಲಾಗಿದೆ.
ಬಂಧಿತರನ್ನು ಸಂಜಯ್ ಕುಮಾರ್ ಮತ್ತು ಮನೋಜ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
ಮೃತನನ್ನು ಉತ್ತರ ಪ್ರದೇಶದ ಶೋಹರತ್ಗಡ್ ಸಿದ್ಧರಥನಗರ ನಿವಾಸಿ ಪ್ರೇಮನಾಥ್ ಎಂದು ಪೊಲೀಸರು ಗುರುತಿಸಿದ್ದಾರೆ.
ಕೋವಿಡ್ -19 ಸೋಂಕು ದೃಢಪಟ್ಟ ಪ್ರೇಮನಾಥ ಅವರನ್ನು ಮೇ 25 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಮ್ಒ) ಬಲರಾಂಪುರ ತಿಳಿಸಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವಾಗ ಮೇ 28 ರಂದು ಅವರು ನಿಧನರಾದರು.
ಕೋವಿಡ್ ಪ್ರೋಟೋಕಾಲ್ ಪ್ರಕಾರ, ಪ್ರೇಮನಾಥ್ ಅವರ ಶವವನ್ನು ಅಂತಿಮ ಶವ ಸಂಸ್ಕಾರಕ್ಕಾಗಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಬಲರಾಂಪುರ್ ಸಿಎಮ್ಒ ಹೇಳಿದ್ದಾರೆ. ಆದರೆ, ಪ್ರೇಮನಾಥ್ ಅವರ ಸಂಬಂಧಿಕರು ಅವರ ದೇಹವನ್ನು ನದಿಗೆ ಎಸೆದರು ಎಂದು ಅವರು ಹೇಳಿದರು.
ಕೋವಿಡ್ -19 ಪ್ರಕರಣಗಳಲ್ಲಿ ಭೀಕರ ಉಲ್ಬಣಗೊಂಡ ಮಧ್ಯೆ ಬಿಹಾರ ಮತ್ತು ಉತ್ತರ ಪ್ರದೇಶದ ನದಿಗಳಲ್ಲಿ ಹಲವಾರು ಶವಗಳು ತೇಲುತ್ತಿರುವಂತೆ ಕಂಡುಬಂದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ.


ನಿಮ್ಮ ಕಾಮೆಂಟ್ ಬರೆಯಿರಿ