ಕೇಂದ್ರದೊಂದಿಗಿನ ಜಗಳದ ಮಧ್ಯೆ, ಬಂಗಾಳದ ಮುಖ್ಯ ಕಾರ್ಯದರ್ಶಿ ನಿವೃತ್ತಿ, ಸಿಎಂ ಮುಖ್ಯ ಸಲಹೆಗಾರರಾಗಿ ನೇಮಕ

ಕೋಲ್ಕತ್ತಾ: ಹಠಾತ್ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಸ್ಥಾನದಿಂದ ಸೋಮವಾರ ಮಧ್ಯಾಹ್ನ ಆಲಾಪನ್ ಬಂಧೋಪಾಧ್ಯಾಯ ನಿವೃತ್ತಿ ಪಡೆದುಕೊಂಡಿದ್ದು, ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.
ಹೊಸ ಆದೇಶದ ಪ್ರಕಾರ ಬಂಡೋಪಾಧ್ಯಾಯ ಜೂನ್ 1ರಿಂದ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದು ಮೂರು ವರ್ಷಗಳ ಕಾಲ ಮುಂದುವರಿಯಲಿದ್ದಾರೆ.ಿವರ ಸ್ಥಾನಕ್ಕೆ ಹೆಚ್‌.ಕೆ. ದ್ವಿವೇದಿ ಅವರನ್ನು ಪಶ್ಚಿಮ ಬಂಗಾಳದ ಹೊಸ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಈ ನಿರ್ಧಾರವನ್ನು ಮಮತಾ ಬ್ಯಾನರ್ಜಿ ಮಾಧ್ಯಮಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. ಅವರ ಸೇವೆಯನ್ನು ಗಣನೆಗೆ ತೆಗೆದುಕೊಂಡು ಮುಖ್ಯಮಂತ್ರಿಯ ಮುಖ್ಯಸಲಹೆಗಾರರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಆಲಾಪನ್ ಬಂಧೋಪಾಧ್ಯಾಯ ನಿವೃತ್ತಿಗೆ ಇಂದೇ(ಮೇ 31) ಕೊನೆಯ ದಿನವಾಗಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಕಾರ್ಯಾವಧಿಯನ್ನು ಮೂರು ತಿಂಗಳ ಕಾಲ ವಿಸ್ತರಿಸಲು ಪಶ್ಚಿಮ ಬಂಗಾಳ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ಆಗಸ್ಟ್ 31ರ ವರೆಗೆ ಅಲಪನ್ ಅವರ ಸೇವಾವಧಿಯನ್ನು ವಿಸ್ತರಿಸಿತ್ತು. ಆದರೆ ಕೇಂದ್ರಕ್ಕೆ ವಾಪಸ್ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ನಿವೃತ್ತಿ ಪಡೆದುಕೊಂಡಿದ್ದಾರೆ.
ಕಳೆದ ಶುಕ್ರವಾರ ಪ್ರಧಾನಿ ಮೋದಿ ಯಾಸ್ ಚಂಡಮಾರುತದ ಹಾನಿ ವೀಕ್ಷಿಸಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ನಡೆದ ಹಾನಿ ಪರಾಮರ್ಶೆಯ ಸಭೆಗೆ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿ ಇಬ್ಬರೂ ಗೈರಾಗಿದ್ದರು. ಈ ಘಟನೆಯ ನಂತರ ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿಯನ್ನು ವಾಪಾಸ್ ಕರೆಸಿಕೊಳ್ಳಲು ಕೇಂದ್ರ ಸೂಚಿಸಿತ್ತು. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಳೆದ ಶುಕ್ರವಾರ ಅವರಿಗೆ ಇಂದು ಬೆಳಿಗ್ಗೆ 10 ಗಂಟೆಯೊಳಗೆ ದೆಹಲಿಯ ನಾರ್ತ್ ಬ್ಲಾಕ್‌ನಲ್ಲಿರುವ ತನ್ನ ಕಚೇರಿಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಘಾತ ವ್ಯಕ್ತಪಡಿಸಿ ಪತ್ರ ಬರೆದಿದ್ದು ಮುಖ್ಯಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ತಿಳಿಸಿದ್ದರು. ಅದಾದ ನಂತರ ಮಧ್ಯಾಹ್ನ ಈ ಬೆಳವಣಿಗೆಯಾಗಿದ್ದು ಅಲಾಪನ್‌ ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕವಾಗಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement