ಮಾನಸಿಕ ವಿಶೇಷ ಚೇತನ ಮಗನ ಮಾತ್ರೆ ತರಲು 280 ಕಿಮೀ ಸೈಕಲ್‌ ತುಳಿದ ತಂದೆ..!

ಮೈಸೂರು: ರಾಜ್ಯವನ್ನು ಕಾಡುತ್ತಿರುವ ಕೊರೊನಾ ಲಾಕ್​ಡೌನ್ ​ನಿಂದಾಗಿ​ ಕೆಲವರು ಅಗತ್ಯ ವಸ್ತು ಹಾಗೂ ಔಷಧಗಳಿಗೆ ತೀವ್ರ ಪರಿತಪಿಸುವಂತಾಗಿದೆ. ಇಲ್ಲೊಬ್ಬ ತಂದೆ ಕೂಡ ಲಾಕ್​ಡೌನ್​ನಿಂದಾಗಿ ಮಗನಿಗೆ ಮಾತ್ರೆ ತರಲು ಹರಸಾಹಸ ಪಟ್ಟ ಘಟನೆ ವರದಿಯಾಗಿದೆ.
ಲಾಕ್​ಡೌನ್​ನಿಂದ ಮಗನಿಗೆ ಔಷಧಿ ತರಲು ತಂದೆ ಬರೋಬ್ಬರು 280 ಕಿ.ಮೀ ಸೈಕಲ್​ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ ಎಂದು ನ್ಯೂಸ್‌18 ಕನ್ನಡ ವರದಿ ಮಾಡಿದೆ.
ತಮ್ಮ ವಿಶೇಷ ಚೇತನ ಮಗನ ಔಷಧಕ್ಕೆ ಅವರು ಮೈಸೂರಿನ ಟಿ ನರಸೀಪುರದಿಂದ ಬೆಂಗಳೂರಿಗೆ ಸೈಕಲ್​ನಲ್ಲಿಯೇ ಬಂದಿದ್ದಾರೆ. ಸುಮಾರು 280 ಕಿ.ಮೀಗಳ ಅಂತರವನ್ನು ಸೈಕಲ್​ನಲ್ಲಿ ಕ್ರಮಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್​ ಮನಗ ಸತತ ಮೂರು ದಿನಗಳ ಕಾಲ ಸೈಕಲ್​ ತುಳಿದಿದ್ದಾರೆ.
ಗಾರೆ ಕೆಲಸ ನಿರ್ವಹಿಸುತ್ತಿರುವ ಆನಂದ್​ ಅವರ ಮಗ ಮಾನಸಿಕ ವಿಶೇಷ ಚೇತನ. ಆತನಿಗೆ ಕಳೆದ 10 ವರ್ಷಗಳಿಂದ ಮಾತ್ರೆಗಳನ್ನು ನೀಡಲಾಗುತ್ತಿದೆ. ಬೆಂಗಳೂರಿನ ನಿಮಾನ್ಸ್​ನಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಮಗನ ಚಿಕಿತ್ಸೆಗೆ ಬೇಕಾದ ಮಾತ್ರೆಗಳು ಮುಗಿದಿವೆ. ಇದನ್ನು ನೀಡಲೇ ಬೇಕು. ಹೀಗಾಗಿ ಈ ಮಾತ್ರೆ ಸಂಬಂಧ ಸಾಕಷ್ಟು ಹುಡುಕಾಟ ನಡೆಸಿದರೂ ಮಾತ್ರೆಗಳು ಬೇರೆ ಎಲ್ಲೂ ಸಿಗದ ಕಾರಣ ಅವರು ಬೆಂಗಳೂರಿನ ನಿಮಾನ್ಸ್​ಗೆ ಬರಬೇಕಾಗಿದೆ. ಒಮ್ಮೆ ಈ ಮಾತ್ರೆಗಳನ್ನು ನೀಡುವುದನ್ನು ತಪ್ಪಿಸಿದರೂ ಇದರಿಂದ ತೊಂದರೆಯಾಗಲಿದೆ. ಹೀಗಾಗಿ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ ಎಂದು ವರದಿ ಹೇಳಿದೆ.
ಮಗನ ಚಿಕಿತ್ಸೆಗೆ ಬೆಂಗಳೂರಿಗೆ ಹೊರಡಲು ಆಟೋ, ವ್ಯಾನ್​ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಕೇಳಿ ನೋಡಿದ್ದಾರೆ. ಆದರೆ, ಯಾವುದೇ, ವಾಹನಗಳು ಬಾಡಿಗೆಗೆ ಸಿಕಿಲ್ಲ. ಅಲ್ಲದೇ, ತಮ್ಮ ಪರಿಚಯಸ್ಥರಲ್ಲಿ ಕೂಡ ಬೈಕ್​ ನೀಡುವಂತೆ ಸಹಾಯ ಕೋರಿದರು. ಲಾಕ್​ಡೌನ್​ ಭೀತಿ ಬೈಕ್​ ಸೀಜ್​ ಆದರೆ ಎಂದು ಅವರೂ ಹಿಂದೆ ಮುಂದೆ ನೋಡಿದ್ದಾರೆ.
ಕಡೆಗೆ ಏನು ಮಾಡುವುದ ಎಂದು ದಿಕ್ಕ ತೋಚದೆ ಅವರು ಮಗನಿಗಾಗಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಸೈಕಲ್​ನಲ್ಲಿಯೇ ಔಷಧಿ ತರುವ ನಿರ್ಧಾರ ಮಾಡಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ಅಲ್ಲಿಂದ ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ಆನಂದ್​ ನಿತ್ಯ 70 ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement