ಬೆಂಗಳೂರು: ಬ್ಲ್ಯಾಕ್ ಫಂಗಸ್ ಔಷಧಿ 1300 ವಯಲ್ಸ್ ನೀಡಿದ್ದು, ಅದು ರಾಜ್ಯದ ರೋಗಿಗಳಿಗೆ ಸಾಕಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪ್ಪು ಶಿಲೀಂಧ್ರ ಔಷಧದ ಕೊರತೆ ನೀಗಿಸಲು ಕೇಂದ್ರ ಸಚಿವ ಸದಾನಂದಗೌಡರ ಜೊತೆ ಮಾತನಾಡಿದ್ದು, ನಾಲ್ಕು ಹಾಗೂ ಐದನೇ ತಾರೀಖಿನ ವೇಳೆಗೆ ಹೆಚ್ಚು ಕಳುಹಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಕಣ್ಣಿಗೆ ತಲುಪಿದ ಮೇಲೆ ಕಣ್ಣಿಗೆ ಹಾನಿಯಾಗುತ್ತದೆ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಹಲ್ಲಿನ ಪರೀಕ್ಷೆ ಮಾಡುತ್ತಾರೆ. ಬಳಿಕ ಕಣ್ಣಿನ ತಜ್ಞರು ಪರೀಕ್ಷೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು..
ರಾಜ್ಯಕ್ಕೆ ಮೂರು ಲಕ್ಷ ಕೋವಿಡ್ ಲಸಿಕೆ ಡೋಸ್ ಬಂದಿದೆ. ಎರಡನೇ ಡೋಸ್ ನೀಡಲು ಸಹಾಯವಾಗುತ್ತಿದೆ. ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಂತಿಮವಾಗಿ ನಿರ್ಣಯಗಳನ್ನ ತೆಗೆದುಕೊಳ್ಳುತ್ತಾರೆ. ಜನಹಿತದ ಅಭಿಪ್ರಾಯಗಳನ್ನು ಕೊಡುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿ ನಿರ್ಣಯ ತೆಗೆದುಕೊಳ್ತಾರೆ.ಈ ಬಗ್ಗೆ ನಮ್ಮ ಅಭಿಪ್ರಾಯ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.
ತಜ್ಞರು ನೀಡಿದ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ. ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ, 5 ಸಾವಿರಕ್ಕೂ ಕಡಿಮೆ ಕೇಸ್ ಬಂದಾಗ ಮಾತ್ರ ಲಾಕ್ ಡೌನ್ ನಿರ್ಬಂಧ ಸಡಿಲ ಮಾಡಲು ಸೂಚಿಸಿದ್ದಾರೆ. ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸೂಚಿಸಿದ್ದಾರೆ. ಆದರೆ ಪಾಸಿಟಿವಿಟಿ ದರ ಶೇ.5 ರಷ್ಟು ಕಡಿಮೆ ಆಗಿಲ್ಲ ಎಂದು ಸುಧಾಕರ್ ಹೇಳಿದರು.
ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ತಜ್ಞರು ಇದ್ದಾರೆ. ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ