ಬೆಂಗಳೂರು: ಕೋವಿಡ್ ಮೂರನೇ ಅಲೆಗೆ ಮುನ್ನೆಚ್ಚರಿಕೆಯಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು,ಆಮ್ಲಜನಕ ಘಟಕಗಳನ್ನು ಪ್ರತಿ ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಾಗುತ್ತಿದೆ. ಎಲ್ಲ ಜಿಲ್ಲಾಸ್ಪತ್ರೆಯಲ್ಲಿ 70-80 ಹಾಸಿಗೆಗಳ ಸೌಲಭ್ಯದ ಮಕ್ಕಳ ಚಿಕಿತ್ಸಾ ವಿಭಾಗ ಮಾಡಿ, ಅದಕ್ಕೆ ಬೇಕಾದ ಮಕ್ಕಳ ತಜ್ಞರು, ನರ್ಸಿಂಗ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಲು ತೀರ್ಮಾನಿಸಲಾಗಿದೆ. 20 ಹಾಸಿಗೆಯ ಮಕ್ಕಳ ವಿಭಾಗವಿದ್ದರೆ ಅದನ್ನು 80 ಹಾಸಿಗೆಗೆ ಏರಿಸಲಾಗುವುದು. ಎಂಬಿಬಿಎಸ್ ವೈದ್ಯರು, ತಾಂತ್ರಿಕ ಸಿಬ್ಬಂದಿಗೆ ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಎರಡನೇ ಅಲೆಯಲ್ಲಿ ಬಂದ ರೂಪಾಂತರಿ ವೈರಾಣು ಪತ್ತೆಗೆ, 5 ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆಯಡಿಯ ಮಂಗಳೂರು ವೆನ್ ಲಾಕ್ ಹಾಗೂ ವಿಜಯಪುರ ಆಸ್ಪತ್ರೆ ಸೇರಿ ಒಟ್ಟು 7 ಕಡೆ ಜೀನೋಮಿಕ್ ಲ್ಯಾಬ್ ಆರಂಭಿಸಲಾಗುವುದು. ವೈರಾಣು ಸ್ವಭಾವ ಅಧ್ಯಯನ ಮಾಡಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಇಲ್ಲಿ ತೀರ್ಮಾನಿಸಲಾಗುವುದು ಎಂದರು.
19 ವರ್ಷದವರಿಗೂ ಮಕ್ಕಳ ತಜ್ಞರೇ ಚಿಕಿತ್ಸೆ ನೀಡಬೇಕು. ಈ ವಯೋಮಾನದವರು ಸಮಸ್ಯೆ ಬಂದಾಗ ಮಕ್ಕಳ ತಜ್ಞರ ಬಳಿ ತೋರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ. ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕಿದೆ. ಮೂರನೇ ಅಲೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂಕಿ ಅಂಶಗಳನ್ನು ರಾಜ್ಯ ಸರ್ಕಾರ ಮುಚ್ಚಿಡುವ ಪ್ರಮೇಯವೇ ಇಲ್ಲ. ವಿರೋಧಪಕ್ಷದ ನಾಯಕರು ಮಾಹಿತಿ ಕೇಳಿದಾಗಲೂ ಒದಗಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ನಿಂದ ಗುಣಮುಖರಾದ ಇಬ್ಬರು ಮಕ್ಕಳಿಗೆ ಕವಾಸಕಿ ಸೋಂಕು ಬಂದಿರುವ ಸಾಧ್ಯತೆ ಇದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಸಾಮಾಜಿಕ ಹಿನ್ನೆಲೆ, ಪೌಷ್ಠಿಕ ಆಹಾರದ ಕೊರತೆ ಕೂಡ ಕಾರಣ. ಈ ಮಕ್ಕಳ ಚಿಕಿತ್ಸೆಗೆ ಹೆಚ್ಚು ಗಮನಹರಿಸಲು ಸೂಚಿಸಲಾಗಿದೆ. ಹಾಗೆಯೇ ಈ ಸೋಂಕು ಏಕೆ ಬಂದಿದೆ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ