ಬೆಂಗಳೂರು: ಕೋವಿಡ್ ಎರಡನೇ ಅಲೆಗೆ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ವಿಫಲವಾಗಿದೆ ಎಂದು ಆರೋಪಿಸಿ, ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ ಎಂದು ಆಗ್ರಹಿಸಿ ಜೂನ್ 10ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಜನ್ಮದಿನವೂ ಆಗಿರುವ ಜೂ.10ರಂದು ಕರವೇ ಕಾರ್ಯಕರ್ತರು ಒಂದೇ ಸಮಯಕ್ಕೆ ನಾಡಿನಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದಾರೆ. ಆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತರಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ತಿಳಿಸಿದ್ದಾರೆ.
ಲಸಿಕೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರ ಅದನ್ನು ಮಾರಾಟಕ್ಕೆ ಇಡಕೂಡದು. ಖಾಸಗಿ ಆಸ್ಪತ್ರೆಗಳ ದುಬಾರಿ ಬೆಲೆಯ ಲಸಿಕೆ ದಂಧೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಪ್ರತಿಯೊಬ್ಬರಿಗೂ ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಕೋವಿಡ್ ಲಸಿಕೆ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಉಚಿತವಾಗಿ ನೀಡಬೇಕು. ಚುನಾವಣಾ ಬೂತ್ ಗಳು, ಪೊಲೀಯೋ ವ್ಯಾಕ್ಸಿನ್ ಬೂತ್ ರಚನೆ ಮಾಡುವ ಹಾಗೆ ನಾಗರಿಕರು ನಡೆದುಹೋಗುವಷ್ಟು ಹತ್ತಿರದಲ್ಲೇ ಲಸಿಕೆ ಬೂತ್ ಸ್ಥಾಪಿಸಿ, ಲಸಿಕೆಗಳನ್ನು ನೀಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಯಲಿದೆ. ಈಗಾಗಲೇ ಸುಪ್ರೀಂ ಕೊರ್ಟ್ ಸಹ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಆದರೂ ಸರ್ಕಾರದ ಬಳಿ ಸಮರ್ಪಕ ಯೋಜನೆಗಳಿಲ್ಲ. ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ನಾವು ಬೀದಿಗಿಳಿದು ಪ್ರತಿಭಟನೆ ನಡೆಸದೆ ಬೇರೆ ದಾರಿ ಕಾಣುತ್ತಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ನಿಯಾಮಳಿಗಳನ್ನು ಪಾಲಿಸುತ್ತಲೇ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮುಂದೆ ಫಲಕಗಳನ್ನ ಹಿಡಿದು ಪ್ರತಿಭಟನೆ ನಡೆಸಬೇಕು. ಆ ವರದಿಗಳನ್ನು ಸರ್ಕಾರಕ್ಕೆ ತಲುಪಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ