ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಪ್ರಮುಖ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಬೆಂಗಳೂರು:ರಾಮಮೂರ್ತಿ ನಗರದಲ್ಲಿ ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಮಾಡಿದ್ದ ಪ್ರಮುಖ ಆರೋಪಿ ಶೂಬೂಜ್ (30) ಮೇಲೆ ಇಂದು (ಬುಧವಾರ) ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಅತ್ಯಾಚಾರಿ ಶೂಬೂಜ್ ಕಾಲಿಗೆ ಗುಂಡು ಹಾರಿಸಲಾಗಿದ್ದು, ನಂತರ ಬಂಧಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು (ಬುಧವಾರ) ಬೆಳಗ್ಗೆ 6.40ಕ್ಕೆ ಬೆಂಗಳೂರಿನ ಅವಲಹಳ್ಳಿಯ ರಾಂಪುರ ಕೆರೆ ಬಳಿ ಈ ಘಟನೆ ನಡೆದಿದೆ. ಬಟನ್ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಶೂಬೂಜ್ ಮೇಲೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ.

ಯುವತಿ ಮೇಲೆ ದೌರ್ಜನ್ಯವೆಸಗಿ ಕ್ರೂರವಾಗಿ ನಡೆದುಕೊಂಡಿದ್ದ ಶೂಬೂಜ್ ಈ ಘಟನೆ ಬಳಿಕ ತಲೆಮರೆಸಿಕೊಂಡಿದ್ದ. ಆತ ಚಿಂದಿ ಆಯುವವರ ಶೆಡ್ ನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದ್ದ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದರು. ಆದರೆ, ಆತನನ್ನು ಪೊಲೀಸ್ ಜೀಪ್​ನಲ್ಲಿ ಕೂರಿಸಿಕೊಂಡಾಗ ಮೂತ್ರ ವಿಸರ್ಜನೆ ಮಾಡಬೇಕೆಂದು ಕತೆ ಕಟ್ಟಿದ್ದ. ಜೀಪ್ ನಿಲ್ಲಿಸದಿದ್ದರೆ ಗಾಡಿಯೊಳಗೇ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿ ಹೆದರಿಸಿದ್ದರಿಂದ ಜೀಪ್ ನಿಲ್ಲಿಸಲಾಗಿತ್ತು.

ಆದರೆ, ಜೀಪಿನಿಂದ ಇಳಿದ ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ತನ್ನ ಬಳಿ ಇದ್ದ ಬಟನ್‌ ಚಾಕುವಿನಿಂದ ಹಲ್ಲೆ ನಡೆಸಿದ್ದ. ಹೆಡ್ ಕಾನ್ಸ್​ಟೇಬಲ್ ದೇವೇಂದರ್ ನಾಯಕ್ ಮತ್ತು ಸಬ್ ಇನ್​ಸ್ಪೆಕ್ಟರ್ ಶಿವರಾಜ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ನೋಡಿದ್ದ. ದೇವೇಂದರ್ ನಾಯಕ್ ಬಲಗೈಗೆ ಮತ್ತು ಶಿವರಾಜ್ ಎಡಗೈಗೆ ಗಾಯವಾಗಿತ್ತು. ಹೀಗಾಗಿ, ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಎಚ್ಚರಿಕೆ ನೀಡಿದ ಪಿಎಸ್ಐ ಶಿವರಾಜ್ ಬಳಿಕ ಆರೋಪಿ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈಗೆ ಪರಾರಿಯಾಗಿದ್ದ ಈ ಗ್ಯಾಂಗ್​ರೇಪ್​ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನುಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಘಟನೆ ನಡೆದ ದಿನ ಸ್ಥಳದಲ್ಲೇ ಇದ್ದು ಅತ್ಯಾಚಾರಕ್ಕೆ ಪ್ರಚೋದನೆ ಕೊಟ್ಟಿದ್ದರು ಎಂಬ ಆರೋಪವಿದೆ. ಮೂವರು ಆರೋಪಿಗಳು ಬಾಂಗ್ಲಾ ದೇಶದವರಾಗಿದ್ದು, ಭಾರತದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದರು ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದ ಬಳಿಕ ಬೃಹತ್ ಮಾನವ ಕಳ್ಳಸಾಗಣೆಯ ವಿಚಾರವೂ ಪತ್ತೆಯಾಗಿದೆ. ವೀಸಾ, ಪಾಸ್​ಪೋರ್ಟ್​ ಇಲ್ಲದೆ ಯುವತಿಯರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಈಗಾಗಲೇ 10 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement