ಮೈಸೂರು: ಚಡ್ಡಿ ಹರಿದಿದೆ, ಬಟ್ಟೆ ಅಂಗಡಿ ತೆರೆಯಿರಿ.. ಹೀಗೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿ ಕೊ.ಸು.ನರಸಿಂಹ ಮೂರ್ತಿ ಅವರುಬರೆದ ಪತ್ರ ಈಗ ವೈರಲ್ ಆಗಿದೆ.
ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
ಪತ್ರದಲ್ಲಿ ಏನೂ ಬರೆದಿದ್ದಾರೆ..?:
ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸೀತು. ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಲಾಕ್ಡೌನ್ ಮುಂದುವರಿಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿದೆ. ಜನರ ಅಗತ್ಯಗಳ ಬಗ್ಗೆ ಸರ್ಕಾರ/ ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು. ಕಳೆದೆರಡು ತಿಂಗಳಿಂದ ಎಲ್ಲ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಇದರಿಂದ ಜನರಿಗಾಗುತ್ತಿರುವ ಕಷ್ಟವೇನು ಎಂದು ನೋಡಿದ್ದೀರಾ?
ಕೇವಲ ಎರಡು ಜತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂಥವರ ಒಳ ಚಡ್ಡಿ ಹಾಗೂ ಬನಿಯನ್ಗಳು ಹರಿಯುತ್ತಿವೆ. ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಆಗಿರಬಹುದು. ಯಾರ ಬಳಿ ಹೇಳ್ಹೋಣ ನಮ್ ಪ್ರಾಬ್ಲಂ? ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ! ಹೀಗೆಂದು ಕೊ.ಸು.ನರಸಿಂಹ ಮೂರ್ತಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ