ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ, ಲಾಕ್‌ಡೌನ್‌ ಮುಂದುವರಿಕೆಯೋ ಇಲ್ಲವೋ ನಿರ್ಧಾರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಆದರೂ ಕೋವಿಡ್‌ ಪಾಸಿಟಿವಿಟಿ ದರ ಶೇ.10ಕ್ಕಿಂತ ಕಡಿಮೆಯಾಗಿಲ್ಲ. ಕೋವಿಡ್‌ ಕುರಿತಾದ ತಾಂತ್ರಿಕ ಸಲಹಾ ಸಮಿತಿಯು ಲಾಕ್‌ಡೌನ್‌ ಮುಂದುವರಿಸಲು ಶಿಫಾರಸು ಮಾಡಿದೆ.
ಈ ಕಾರಣದಿಂದ ರಾಜ್ಯದಲ್ಲಿ ಲಾಕ್‌ಡೌನ್ ಕುರಿತು ಚರ್ಚಿಸಲು ಇಂದು (ಬುಧವಾರ) ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಸಭೆ ಕರೆದಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು (ಬುಧವಾರ)ಸಂಜೆ 4.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ಕೋವಿಡ್ ತಜ್ಞರು, ವೈದ್ಯರು ಪಾಲ್ಗೊಳ್ಳಲಿದ್ದಾರೆ. ಯಾವಾಗ ಅನ್‌ಲಾಕ್ ಮಾಡಿದರೆ ಒಳ್ಳೆಯದು ಎಂಬ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆಯಲಿದ್ದಾರೆ.
ನಂತರ ಸಂಜೆ 6ಕ್ಕೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಿದ್ದು, ತಜ್ಞರ ಸಭೆಯ ಸಲಹೆಗಳ ಕುರಿತು ಅವರು ಚರ್ಚೆ ಮಾಡಲಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳ ಅಭಿಪ್ರಾಯ ಆಲಿಸಿ ಅಂತಿಮ ನಿರ್ಧಾರವನ್ನು ಇಂದು (ಬುಧವಾರ) ಅಥವಾ ನಾಳೆ (ಗುರುವಾರ) ತೆಗೆದುಕೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಲಾಕ್‌ಡೌನ್‌ನ್ನು ಮತ್ತೊಂದು ವಾರ ಮುಂದುವರಿಸುತ್ತಾರಾ ಅಥವಾ ಬೆಂಗಳೂರಿಗೆ ಒಂದುವಾರ ಲಾಕ್‌ಡೌನ್‌ ನಿಗದಿ ಮಾಡಿ ಉಳಿದೆಡೆ ಎರಡು ವಾರಗಳ ಕಾಲ ವಿಸ್ತರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯ ಸರ್ಕಾರದ ಮುಂದಿರುವ ದೊಡ್ಡ ಸವಾಲೆಂದರೆ ದೈನಂದಿನ ಸೋಂಕು ಕಡಿಮೆಯಾಗುತ್ತಿದ್ದರೂ ಮರಣದ ಪ್ರಮಾಣ ಕಡಿಮೆಯಾಗದಿರುವುದು. ಈ ಕಾರಣದಿಂದಾಗಿಯೇ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಲಾಕ್‌ಡೌನ್‌ ಮುಂದುವರಿಸಲು ಶಿಫಾರಸು ಮಾಡಿದೆ.
ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ್‌ಸ್ವಾಮಿ ಲಾಕ್‌ಡೌನ್‌ ಅನ್ನು ಇನ್ನೂ ಕೆಲಕಾಲ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಅನೇಕ ಸಚಿವರು ಸಹ ಇದೇ ಮಾತನ್ನೇ ಹೇಳಿದ್ದಾರೆ. ಹೀಗಾಗಿ ಈಸಭೆಗೆ ಮಹತ್ವ ಬಂದಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರ ಏನು ಎಂಬುದು ಸಭೆಯ ಅಭಿಪ್ರಾಯದ ಮೇಲೆ ಅವಲಂಬಿತವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement