ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಇದ್ದಿದ್ದನ್ನೇ ಉಳಿಸಿಕೊಂಡಿದೆ ಎಂದು ತಿಳಿಸಿದರು.
ಕೋವಿಡ್-19 ಅನಿಶ್ಚಿತತೆ ಮತ್ತು ಹಣದುಬ್ಬರದ ಮೇಲಿನ ಆತಂಕಗಳ ನಡುವೆ ಆರ್‌ಬಿಐ ಶುಕ್ರವಾರ ಬಡ್ಡಿದರ ಬದಲಿಸಲಿಲ್ಲ. ಏಪ್ರಿಲ್ 2021 ರಲ್ಲಿ ನಡೆದ ಕೊನೆಯ ಎಂಪಿಸಿ ಸಭೆಯಲ್ಲಿ ರೆಪೋ, ರಿವರ್ಸ್ ರೆಪೋ ದರಗಳನ್ನು ಬದಲಿಸಲಿಲ್ಲ.
2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ಆರ್‌ಬಿಐ ತಗ್ಗಿಸಿದೆ.
ಜೊತೆಗೆ ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ 2021-22ರಲ್ಲಿ ಶೇಕಡಾ 5.1ರಷ್ಟು, ಮೊದಲ ತ್ರೈಮಾಸಿಕದಲ್ಲಿ ಶೇ. 5.2, ದ್ವಿತೀಯ ತ್ರೈಮಾಸಿಕದಲ್ಲಿ ಶೇ. 5.4, ತೃತೀಯ ತ್ರೈಮಾಸಿಕದಲ್ಲಿ ಶೇ. 4.7ರಷ್ಟು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 5.3ರಷ್ಟು ಅಂದಾಜಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ