ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್: ಸಿಎಂಗೆ ಹೊರಟ್ಟಿ ಅಭಿನಂದನೆ

ಹುಬ್ಬಳ್ಳಿ; ಜಾಗತಿಕ ಮಹಾಮಾರಿ ಕೋವಿಡ್‍ದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ತಮ್ಮ ಮನವಿಗೆ ಸ್ಪಂದಿಸಿದ್ದಕ್ಕೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ಸಭಾಪತಿ ಹೊರಟ್ಟಿಯವರು ಕಳೆದ ಬಾರಿಯ ಕೋವಿಡ್ ಸಂದರ್ಭದಿಂದ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಪ್ಯಾಕೇಜ್ ನೀಡಿ ಅವರಿಗೆ ಸರಕಾರ ಸೂಕ್ತ ಸಹಾಯ ಕಲ್ಪಿಸುವಂತೆ ಹಲವು ಬಾರಿ ಒತ್ತಾಯಿಸಿದ್ದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಭಾಪತಿಗಳು ತಮಗೆ ಸಲಹೆ ರೂಪದಲ್ಲಿ ನೀಡಲಾದ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಸಭಾಪತಿಗಳು ಸೂಚಿಸಿದಂತೆ ಎಲ್ಲಾ ಶಿಕ್ಷಕರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಸಹಾಯಧನ ನೀಡಬೇಕೆಂದು ತಾವು ಒತ್ತಾಯಿಸಿದ್ದು ಅದಕ್ಕೆ ಸ್ಪಂದಿಸಿ 5 ಸಾವಿರರೂ. ಪರಿಹಾರಧನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭಾಪತಿಗಳು ಸೂಚಿಸಿರುವಂತೆ ಎಲ್ಲ ಶಿಕ್ಷಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಬ್ಲ್ಯಾಕ್ ಫಂಗಸ್‍ದಿಂದ ಬಳಲುತ್ತಿರುವ ರೋಗಿಗಳಿಗೆ ಸರಕಾರದಿಂದಲೇ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬರುವ ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗಾಗುವ ತೊಂದರೆಗಳ ಕುರಿತು ತಜ್ಞರ ಸಮಿತಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಚರ್ಚೆಯ ಮಧ್ಯೆ ಪ್ರವೇಶಿಸಿದ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ಯಾಕೇಜ್ ಘೋಸಿಸಬೇಕು ಹಾಗೂ ಕೋವಿಡ್ ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದಿದ ಶಿಕ್ಷಕರ ಕುಟುಂಬಕ್ಕೆ ಸರಕಾರಿ ನೌಕರಿ ನೀಡಬೇಕೆಂದು ಹಾಗೂ ಸೂಕ್ತ ಪರಿಹಾರ ಘೋಷಿಸುವಂತೆ ಸಲಹೆ ಮಾಡಿದರು. ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ರಾಜ್ಯದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಅಗತ್ಯ ಪ್ಯಾಕೇಜ್ ಹಾಗೂ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುವಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಉಪಮುಖ್ಯಗಳಾದ ಡಾ. ಅಶ್ವತ್ಥ ನಾಯಾರಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರಿಗೂ ಹಲವು ಬಾರಿ ಪತ್ರ ಬರೆದು ಈ ಹಿಂದೆ ಕೋರಿದ್ದಾಗಿ ಮುಖ್ಯಮಂತ್ರಿಗಳಿಗೆ ಹೊರಟ್ಟಿ ಅವರು ತಿಳಿಸಿದರು.

ಪ್ರಮುಖ ಸುದ್ದಿ :-   6 ವರ್ಷ ನರೇಂದ್ರ ಮೋದಿ ಅನರ್ಹತೆ : ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement