ಯಡಿಯೂರಪ್ಪನವರೇ ನಮ್ಮ ಸರ್ವ ಸಮ್ಮತ ನಾಯಕ, ನಾಯಕತ್ವ ಬದಲಾವಣೆ ಚರ್ಚೆ ಇಂದಿಗೇ ಅಂತ್ಯ

ಬೆಂಗಳೂರು: ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದದ್ದು, ಬಿಜೆಪಿ ರಾಜ್ಯ ನಾಯಕರು ಯಡಿಯೂರಪ್ಪನವರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.
ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿದಾಕ್ಷಣ ಅವರ ನಿವಾಸಕ್ಕೆ ದೌಡಾಯಿಸಿದ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್. ಅಶೋಕ್, ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೊದಲಾದವರು ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಮನಸ್ಸಿಗೆ ನೋವಾಗಿರಬಹುದು. ಹಾಗಾಗಿ ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಯಡಿಯೂರಪ್ಪನವರೇ ನಮ್ಮ ಸರ್ವ ಸಮ್ಮತ ನಾಯಕರು. ಈ ಬಗ್ಗೆ ರಾಜ್ಯದ ನಾಯಕರಿಗಾಗಲೀ, ಬಿಜೆಪಿ ಹೈಕಮಾಂಡ್ ಗಾಗಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಮನೆಯಿಂದಲೇ ಹೊರಬರುತ್ತಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಹಗಲು ರಾತ್ರಿ ಎನ್ನದೇ ಹೊರಬಂದು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಆಸ್ಪತ್ರೆಗಳಿಗೆ ತೆರಳಿ ಸ್ವತಃ ಪರಿಶೀಲನೆ ನಡೆಸುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿ ನೆರವಾಗಲು ಎರಡು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. ಆದರೂ ಕೆಲವರಿಂದ ತಾವೇ ಮುಂದಿನ ಮುಖ್ಯಮಂತ್ರಿಗಳು ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಅವರ ಮನಸ್ಸಿಗೆ ನೋವು ತಂದಿದೆ. ಇನ್ಮುಂದೆ ನಾಯಕತ್ವ ಬದಲಾವಣೆಯ ಯಾವುದೆ ಚರ್ಚೆಗೆ ಆಸ್ಪದವಿಲ್ಲ. ಎಲ್ಲವೂ ಇಂದಿಗೆ ಕೊನೆಯಾಗಿದೆ. ಯಡಿಯೂರಪ್ಪನವರೇ ನಮ್ಮ ನಾಯಕರು ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement