ಬೆಂಗಳೂರು: ಸಂಭವನೀಯ ಕೋವಿಡ್ ಮೂರನೇ ಅಲೆ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯವನ್ನು ಸನ್ನದ್ಧಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ 1,500 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಹಾಗೂ ಮೂರು ತಿಂಗಳಲ್ಲಿ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಮಾಹಿತಿ ನೀಡಿದ ಅವರು, ಪ್ರಾಥಮಿಕ ಮಟ್ಟದಿಂದ ಜಿಲ್ಲಾ ಆಸ್ಪತ್ರೆವರೆಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ದಲ್ಲಿ ಆಮೂಲಾಗ್ರ ಸುಧಾರಣೆ ತರಲಾಗುವುದು. ಪ್ರತೀ ತಾಲೂಕು ಆಸ್ಪತ್ರೆಯಲ್ಲೂ ಒಟ್ಟು 100 ಹಾಸಿಗೆಗಳ ವ್ಯವಸ್ಥೆ , ಈ ಹಾಸಿಗೆಗಳ ಪೈಕಿ 25 ಐಸಿಯು, 25 ಎಚ್ಡಿಯು ಹಾಗೂ 50 ಆಮ್ಲಜನಕ ಸಹಿತ ಹಾಸಿಗೆಗಳಿರುತ್ತವೆ. ಇದರ ಜೊತೆಗೆ ವೆಂಟಿಲೇಟರ್, ಮಾನಿಟರ್ಗಳು ಮತ್ತು ಬೈಪ್ಯಾಪ್ ವ್ಯವಸ್ಥೆಗೆ ಕ್ರಮ ಕೈಗಳ್ಳಲಾಗುವುದು. ಅಲ್ಲದೆ ರಿಮೋಟ್ ಐಸಿಯುಗಳ ಜೊತೆಗೆ ಎಲ್ಲ ಡಯಾಗ್ನಾಸ್ಟಿಕ್ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಇವುಗಳನ್ನು ನಿರ್ವಹಿಸಲು ಬೇಕಾದ ನುರಿತ ಸಿಬ್ಬಂದಿ ಸಮರೋಪಾದಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
146 ತಾಲೂಕು ಹಾಗೂ 16 ಜಿಲ್ಲಾಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಇನ್ನೂ ಮೂರು ಆಸ್ಪತ್ರೆಗಳ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಇಡೀ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸಂಪೂರ್ಣ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ ತನಕ ಇಷ್ಟೆಲ್ಲ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು 4,000 ವೈದ್ಯರ ಅಗತ್ಯವಿದೆ. ಒಬ್ಬ ವೈದ್ಯರಿಗೆ ಮೂವರು ನರ್ಸ್ಗಳಂತೆ, ಒಬ್ಬ ವೈದ್ಯರಿಗೆ ಗ್ರೂಪ್ ʼಡಿʼ ಮೂವರು ಸಿಬ್ಬಂದಿ ಅಗತ್ಯ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನ ಸಲುವಾಗಿ 1,500 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ವಾರ್ಷಿಕ 600 ಕೋಟಿ ರೂ. ವೇತನ ಹೊರತುಪಡಿಸಿದರೆ ಮಿಕ್ಕ ಬಹುತೇಕ ವೆಚ್ಚ ಒಮ್ಮೆಯಷ್ಟೇ ಆಗುವಂಥದ್ದು . ಕಟ್ಟಡ, ಆಮ್ಲಜನಕ ಜನರೇಟರ್, ವೆಂಟಿಲೇಟರ್, ಯಂತ್ರೋಪಕರಣ ಇತ್ಯಾದಿ ಸೇರಿ ಅಂದಾಜು 800 ಕೋಟಿ ರೂ.ಗಳಷ್ಟು ವೆಚ್ಚ ಆಗಲಿದೆ. ಈ ಕುರಿತ ಅಂದಾಜು ವೆಚ್ಚದ ವಿವರಗಳನ್ನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆಯಲ್ಲಿ ಮಂಡಿಸಿದ್ದು, ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಯಾರೂ ತಮ್ಮ ತಾಲೂಕು ಬಿಟ್ಟು ಬೇರೆಡೆಗೆ ಹೋಗುವ ಅಗತ್ಯ ಬರಬಾರದು ಹಾಗೂ ಜಿಲ್ಲಾ ಮಟ್ಟದಲ್ಲೇ 97% ಆರೋಗ್ಯ ಸೇವೆ ಸಿಗಬೇಕು ಎಂಬುದು ಸರಕಾರದ ಉದ್ದೇಶ. ಇದಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಬಿಸಿಜಿ (ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್) ನಮಗೆ ಸಿಎಸ್ಆರ್ ಮೂಲಕ ಉಚಿತವಾಗಿ ತಾಂತ್ರಿಕ ನೆರವು ನೀಡುತ್ತಿದೆ ಎಂದರು.
ಬೆಂಗಳೂರಿನಲ್ಲಿ ಆರೋಗ್ಯ ಮೂಲಸೌಕರ್ಯ ವಿಸ್ತರಿಸಲು ಸ್ಥಳದ ಅಭಾವ ಇದ್ದು, ಹೊಸ ಜಾಗಗಳನ್ನು ಅಥವಾ ಲಭ್ಯ ಸ್ಥಳಗಳನ್ನು ಗುರುತಿಸಲು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ನಗರದ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಅಗಾಧವಾಗಿ ಹೆಚ್ಚಿಸಲಾಗುವುದು. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಗಳಲ್ಲಿ ಒಳಗೊಳ್ಳದ ನಿತ್ಯದ ಕಾಯಿಲೆಗಳಿಗೂ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 2ನೇ ಹಂತದ ಆಸ್ಪತ್ರೆಗಳನ್ನು ಪೂರ್ಣವಾಗಿ ಮೇಲ್ದರ್ಜೆಗ ಏರಿಸಲಾಗುವುದು ಒಂದೆರಡು ವಾರದಲ್ಲಿ ಈ ಸಮಿತಿ ವರದಿ ನೀಡಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೊಂದು 100 ಹಾಸಿಗೆಗಳ ಉತ್ಕೃಷ್ಟ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತಿದೆ. ಇಲ್ಲಿಯೂ 25 ಐಸಿಯು, 25 ಎಚ್ಡಿಯು ಹಾಗೂ 50 ಆಮ್ಲಜನಕ ಹಾಸಿಗೆಗಳಿರುತ್ತವೆ. ಜತೆಗೆ, 4 ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡಲಾಗುತ್ತದೆ ಎಂದು ಡಾ.ಅಶ್ವತ್ಥ ನಾರಾಯನ ಮಾಹಿತಿ ನೀಡಿದರು.


ನಿಮ್ಮ ಕಾಮೆಂಟ್ ಬರೆಯಿರಿ