ನವದೆಹಲಿ: ಕೊರೊನಾ ವೈರಸ್ ಸೋಂಕಿನ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯವಿದೆ ಎಂಬ ಬಗ್ಗೆ ಯಾವುದೇ ಆಧಾರವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ಸಂಶೋಧನಾ ಸಂಸ್ಥೆ ( AIIMS) ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಮಂಗಳವಾರ ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕಿನ ಎರಡೂ ಅಲೆಗಳಲ್ಲಿ ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಹಳೆಯ ವೈರಾಣು ಇರಬಹುದು ಅಥವಾ ಹೊಸ ರೂಪಾಂತರವೇ ಇರಬಹುದು. ಅದರಿಂದ ಮಕ್ಕಳಲ್ಲಿ ತೀವ್ರತರವಾದ ಅಪಾಯ ಇದೆ ಎಂದು ಖಚಿತವಾಗಿ ಹೇಳಲುಆಗುವುದಿಲ್ಲ ಎಂದು ಅವರು ಹೇಳಿದರು.
ವಿಶ್ವದ ಅಥವಾ ಭಾರತದಲ್ಲಿ ಸಂಗ್ರಹಿಸಿದ ಯಾವುದೇ ದತ್ತಾಂಶವನ್ನು ಗಮನಿಸಿದರೂ ಮಕ್ಕಳಿಗೆ ಹೆಚ್ಚು ಆತಂಕವಿದೆ ಎಂದು ಅನ್ನಿಸುವುದಿಲ್ಲ. 2ನೇ ಅಲೆಯಲ್ಲಿಯೂ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಸೋಂಕಿನ ಲಕ್ಷಣಗಳು ಅಲ್ಪಪ್ರಮಾಣದಲ್ಲಿ (ಮೈಲ್ಡ್) ಕಾಣಿಸಿಕೊಂಡಿತ್ತು. ವಿಶ್ವದ ಇತರ ದೇಶಗಳಲ್ಲಿ ಸಂಗ್ರಹಿಸಿದ್ದ ದತ್ತಾಂಶ ವಿಶ್ಲೇಷಿಸಿದಾಗಲೂ ಮಕ್ಕಳಲ್ಲಿ ತೀವ್ರತರನಾದ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಎರಡನೇ ಅಲೆಯಲ್ಲಿ ಕೊಮಾರ್ಬಿಲಿಟಿ ಸಮಸ್ಯೆ ಇಲ್ಲದಿರುವ ಸಾಕಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವೇ ಇಲ್ಲದೆ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಶೇ 60-70 ಮಕ್ಕಳಿಗೆ ಕೊಮಾರ್ಬಿಲಿಟಿ ಸಮಸ್ಯೆಯಿತ್ತು. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿತ್ತು ಅಥವಾ ಕಿಮೊಥೆರಪಿ ತೆಗೆದುಕೊಳ್ಳುತ್ತಿದ್ದರು. ಆರೋಗ್ಯವಂತ ಮಕ್ಕಳಲ್ಲಿ ಅಲ್ಪಪ್ರಮಾಣದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು ಎಂದು ಅವರು ಹೇಳಿದರು.
ದೇಶದಲ್ಲಿ ಮತ್ತೊಂದು ಕೊವಿಡ್ ಅಲೆ ತಡೆಯಲು ನಾವೆಲ್ಲರೂ ಸೂಕ್ತ ಜೀವನಪದ್ಧತಿ ಅಳವಡಿಸಿಕೊಳ್ಳಬೇಕು. ತಪ್ಪು ಮಾಹಿತಿಗೆ ಗಮನ ಕೊಡುವುದು ಬೇಡ. ಜನಸಂದಣಿ ಇರುವ ಸ್ಥಳಗಳಿಂದ ದೂರವಿರಿ. ಸೋಂಕು ಸರಣಿಯನ್ನು ತುಂಡರಿಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ