ರಾಜ್ಯ ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ, ಶೀಘ್ರವೇ ಇತ್ಯರ್ಥ : ಈಶ್ವರಪ್ಪ ವಿಶ್ವಾಸ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಗೊಂದಲಗಳಿರುವುದು ನಿಜ. ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಬಂದು ಹೋದ ಮೇಲೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಹೇಳುವವರು ಕೇಳುವವರು ಇದ್ದಾರೆ. ಹಾಗಾಗಿಯೇ ಅರುಣ್‌ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಕೆಲವರು ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪಿಸಿದ್ದಾರೆ. ಇನ್ನೂ ಕೆಲವರು ಯಡಿಯೂರಪ್ಪನವರೆ ಮುಂದುವರಿಯಬೇಕು ಎಂದು ಹೇಳಿದ್ದಾರೆ, ಕೆಲವರು ದೆಹಲಿಗೂ ಹೋಗಿ ಬಂದಿದ್ದಾರೆ. ಈ ಎಲ್ಲ ಗೊಂದಲಗಳು ಈಗ ಪರಿಹಾರ ಆಗಲಿದೆ ಎಂದರು.
ವಲಸಿಗ ಶಾಸಕರು, ಸಚಿವರಿಂದ ಗೊಂದಲಗಳಾಗುತ್ತಿದೆ ಎಂಬುದನ್ನು ತಳ್ಳಿ ಹಾಕಿದ ಈಶ್ವರಪ್ಪ ಅವರು, ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿಲ್ಲ. ಬಹುಮತ ಬಂದಿದ್ದರೆ ಈ ಸಮಸ್ಯೆಗಳಾಗುತ್ತಿರಲಿಲ್ಲ. ವಲಸಿಗ ಶಾಸಕರಿಂದ ಸರ್ಕಾರ ಬಂದಿದೆ. ಅವರ ಋಣ ನಮ್ಮ ಮೇಲಿದೆ. ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈ ಗೊಂದಲಗಲೇ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿದರು.
ಅರುಣ್‌ಸಿಂಗ್‌ ಅವರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಇರುತ್ತಾರೆ, ಹೀಗಾಗಿ ಸಚಿವರಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಶಾಸಕರ ಅಹವಾಲು ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇರುವುದಿಲ್ಲ. ಅರುಣ ಸಿಂಗ್‌ ಒಬ್ಬರೇ ಇರುತ್ತಾರೆ. ಆಗ ಮುಕ್ತವಾಗಿ ಮಾತನಾಡಲು ಅವಕಾಶವಿದೆ ಎಂದರು.
ಈ ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ನೀಡಿದ ಸಂದರ್ಭದಲ್ಲೂ ಅವರ ಜತೆ ಮಾತನಾಡಿ ಬಹಿರಂಗವಾಗಿ ಹೇಳಿಕೆ ನೀಡಬೇಡಿ ಎಂದಿದ್ದೆ. ಹಾಗೆಯೇ ಸಚಿವ ಯೋಗೇಶ್ವರ ಜತೆಯೂ ಮಾತನಾಡಿದ್ದೆ. ಶಾಸಕ ರೇಣುಕಾಚಾರ್ಯ ಅವರು ಸಹಿ ಸಂಗ್ರಹಕ್ಕೆ ಮುಂದಾದಾಗ ಇದೆಲ್ಲ ಬೇಡ ಎಂದು ತಿಳಿ ಹೇಳಿದ್ದೆ. ಪಕ್ಷದ ವಿಚಾರವನ್ನು ಹಿರಿಯರ ಸಮ್ಮುಖದಲ್ಲಿ ನಾಲ್ಕು ಗೋಡೆಯ ಮಧ್ಯೆಯೇ ಬಗೆಹರಿಸಿಕೊಳ್ಳಬೇಕು.
ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಬದ್ಧ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ ; ಕಾರಣ ಏನು ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement