ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೆನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ ಐಎ) ಗುರುವಾರ ಮುಂಬೈ ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ನಿವಾಸದ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಪ್ರದೀಪ್ ಶರ್ಮಾ ಅವರ ಮುಂಬೈ ಅಂಧೇರಿ ನಿವಾಸಕ್ಕೆ ಇಂದು (ಗುರುವಾರ) ಬೆಳಿಗ್ಗೆ ಎನ್ ಐಎ ತಂಡ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲಿ ಪ್ರದೀಪ್ ಶರ್ಮಾ ಅವರು ನಿವಾಸದಲ್ಲಿ ಇದ್ದರು ಎಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಎರಡು ಬಾರಿ ಪ್ರದೀಪ್ ಶರ್ಮಾ ಅವರನ್ನು ವಿಚಾರಣೆ ಮಾಡಿದ್ದರು. ಪ್ರದೀಪ್ ಶರ್ಮಾ ಬಂಧಿತ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯ ಆಪ್ತ ಎನ್ನಲಾಗಿದೆ.
ಎರಡು ಪ್ರಕರಣಗಳ ಮುಖ್ಯ ರೂವಾರಿ ಎನ್ನಲಾದ ಸಚಿನ್ ವಾಝೆಯನ್ನು ಎನ್ ಐಎ ಬಂಧಿಸಿತ್ತು. ಪ್ರದೀಪ್ ಶರ್ಮಾ ಮುಂಬೈ ಭೂಗತ ಜಗತ್ತಿನ ಸುಮಾರು 300 ಜನರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡುವ ಮೂಲಕ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ