ಬೆಂಗಳೂರು: ಸದ್ಯ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಜೂನ್ 21ರಿಂದ 2ನೇ ಹಂತದ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಆಗ ಇನ್ನೂ ಹೆಚ್ಚಿನ ವಿನಾಯಿಯಿ ಸಿಗುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.. ಬೆಂಗಲೂರಿನಲ್ಲಿ ದೈನಂದಿನ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿರುವುದರಿಂದ ಬಿಎಂಟಿಸಿ ಬಸ್ಗಳು ಜೂನ್ 21ರಿಂದ ನಿರ್ದಿಷ್ಟ ಸಂಖ್ಯೆಯಲ್ಲಿ ಕಾರ್ಯಾಚರಣೆ ಆರಂಭಿಸಲಿವೆ ಎಂದು ಹೇಳಲಾಗುತ್ತಿದೆ.
ಸೋಮವಾರದಿಂದ (ಜೂನ್ 21) ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಅಂದಿನಿಂದ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ನಿರ್ಧಾರ ಮಾಡಿದೆ.
ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಬಿಬಿಎಂಪಿ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಎಂದಿತ್ತು. ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದರೆ ಮತ್ತೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರಕ್ಕೆ ಅನುಮತಿ ಬೇಡ ಎಂದು ಪಾಲಿಕೆ ಸರ್ಕಾರಕ್ಕೆ ಮನವಿ ಮಾಡಿತ್ತು. ಹೀಗಾಗಿ ಬಸ್ ಓಡಾಟ ಆರಂಭಿಸಿರಲಿಲ್ಲ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಬಿಬಿಎಂಪಿ ಮೇಲೆ ಒತ್ತಡ ಇದೆ. ಬಸ್ಗಳಿಗೆ ಅನುಮತಿ ನೀಡಿದರೆ ಏನೆಲ್ಲಾ ಷರತ್ತುಗಳನ್ನ ವಿಧಿಸಬೇಕು ಎಂಬ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ಕೊಟ್ಟಿದೆ. ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಿಎಂಟಿಸಿ ಎಂಡಿ ಜತೆ ಮಾತುಕತೆ ನಡೆದಿದೆ. ಜತೆಗೆ ಗೌರವ್ ಗುಪ್ತಾ ಅವರು ನಗರ ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಬಿಬಿಎಂಸಿ ಮುಂದಿರುವ ಸಂಭನೀಯ ಷರತ್ತುಗಳು..
ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ನೀಡಬಾರದು,
ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ ವಹಿಸುವುದು. ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ. ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್ ಸಂಚಾರ ನಿಲ್ಲಿಸಬೇಕು ಎಂದು ತಿಳಿಸಲಾಗಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ