ಮೆಟ್ರೋ ಸಂಚಾರ ಜೂನ್ 21ರಿಂದ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು:ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆ ಇರುವ ಕರ್ನಾಟಕದ 16 ಜಿಲ್ಲೆಗಳಲ್ಲಿ ಜೂನ್ 21ರಿಂದ ಅನ್‌ಲಾಕ್ 2.0 ಘೋಷಣೆ ಮಾಡಲಾಗಿದ್ದು, ಕೆಲವು ಷರತ್ತುಗಳೊಂದಿಗೆ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ರೈಲುಗಳ ಓಡಾಟಕ್ಕೂ ಅನುಮತಿ ನೀಡಲಾಗಿದ್ದು, ಶೇ 50ರಷ್ಟು ಪ್ರಯಾಣಿಕರೊಂದಿಗೆ ಮಾತ್ರ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ನಮ್ಮ ಮೆಟ್ರೋ ರೈಲು ಸಂಚಾರ ಏಪ್ರಿಲ್ 28ರಿಂದ ನಿಂತಿತ್ತು. ಜೂನ್ 21ರಿಂದ ಓಡಾಟ ಮತ್ತೆ ಆರಂಭವಾಗಲಿದೆ.ಆದರೆ ಈ ಸಂಬಂಧ ಮೆಟ್ರೋ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಸೋಮವಾರದಿಂದ ಶುಕ್ರವಾರದ ವರೆಗೆ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ವೀಕೆಂಡ್ ಕರ್ಫ್ಯೂ ಕಾರಣ ಶನಿವಾರ ಹಾಗೂ ಭಾನುವಾರ ಮೆಟ್ರೋ ಸೇವೆ ಸ್ಥಗಿತವಾಗಲಿದೆ. ಹಸಿರು, ನೇರಳೆ ಎರಡೂ ಮಾರ್ಗಗಳಲ್ಲಿ ರೈಲು ಓಡಾಡಲಿದ್ದು, ಬೆಳಿಗ್ಗೆ 7ರಿಂದ ಬೆಳಿಗ್ಗೆ 11 ಹಾಗೂ ಸಂಜೆ 3ರಿಂದ ಸಂಜೆ 6ರ ವರೆಗೆ ಐದು ನಿಮಿಷಗಳ ಅಂತರದಲ್ಲಿ ರೈಲುಗಳ ಓಡಾಟವಿರಲಿದೆ ಎಂದು ತಿಳಿಸಲಾಗಿದೆ.
ಮಾರ್ಗಸೂಚಿಗಳು..:
* ಮೆಟ್ರೋ ಸ್ಮಾರ್ಟ್ ಕಾರ್ಡ್ ಇರುವವರಿಗೆ ಮಾತ್ರ ಅವಕಾಶ
* ಬಿಎಂಆರ್‌ಸಿಎಲ್ ವೆಬ್‌ಸೈಟ್ ಹಾಗೂ ಆನ್‌ಲೈನ್‌ ಟಾಪ್‌ಅಪ್ ಮೂಲಕ ಸ್ಮಾರ್ಟ್ ಕಾರ್ಡ್ ಖರೀದಿ ಹಾಗೂ ರಿಚಾರ್ಜ್ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಖರೀದಿಗೆ ಅವಕಾಶವಿದೆ. ಹಣ ನೀಡಿ ಸ್ಮಾರ್ಟ್ ಕಾರ್ಡ್ ಖರೀದಿಸಲು ಅವಕಾಶವಿದೆ. ಆದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ನಗದುರಹಿತ ಖರೀದಿಗೆ ಸಲಹೆ ನೀಡಲಾಗಿದೆ.
* ಎಲ್ಲ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್
* ಮೆಟ್ರೋ ಪ್ರವೇಶಕ್ಕೂ ಮುನ್ನ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು.
* ಎಸ್ಕಲೇಟರ್ ಬಳಕೆಯಲ್ಲೂ ಅಂತರ ಕಾಯ್ದುಕೊಳ್ಳಲು ಸೂಚನೆ
* ಒಂದು ಬಾರಿ ನಾಲ್ಕು ಜನರಿಗೆ ಲಿಫ್ಟ್ ಬಳಸಲು ಅವಕಾಶ
* ಫೇಸ್‌ ಮಾಸ್ಕ್‌, ಸಾಮಾಜಿಕ ಅಂತರ ಕಡ್ಡಾಯ
ರಾಜ್ಯದಲ್ಲಿ ಜೂನ್ 21ರಿಂದ ಎರಡನೇ ಹಂತದ ಅನ್‌ಲಾಕ್ ಆಗಲಿದ್ದು, ಕೊರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಇರುವ ಹದಿನಾರು ಜಿಲ್ಲೆಗಳಿಗೆ ಸಿಎಂ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement