ಶಿರಸಿ:ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಪೀಠಾಧೀಶರೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಕೆಲ ಸಮಯ ಯೋಗದ ವಿವಧ ಆಸನಗಳು ಹಾಗೂ ಪ್ರಾಣಾಯಾಮಗಳನ್ನು ಮಾಡುವ ಮೂಲಕ ಗಮನ ಸೆಳೆದರು. ಜೊತೆಗೆ ಯೋಗಾಸನದ ಕ್ರಮಬದ್ಧತೆ ಹಾಗೂ ಸಮತ್ವದ ಬಗ್ಗೆ ವಿವರವಾಗಿ ಮಾತನಾಡಿದರು.
ಜೀವನದ ಸಮತೆ ಪಡೆಯಲು ಯೋಗಾನುಷ್ಠಾನ ಮಹತ್ವದ್ದು: ಸ್ವರ್ಣವಲ್ಲೀ ಶ್ರೀಶಿರಸಿ: ಜೀವನದ ಸಮತೆ ಪಡೆಯಲು ಯೋಗಾನುಷ್ಠಾನ ಮಹತ್ವದ್ದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹೇಳಿದರು.
ಸೋಮವಾರ ಅವರು ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಯೋಗಾನುಷ್ಠಾನ ನಡೆಸಿದ ನಂತರ ಮಾತನಾಡಿದರು.
ಆಸನ ಹಾಗೂ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಅದು ಆಗದು ಎಂದು ಹೇಳಿದರು.
ಯೋಗ ದಿನಾಚರಣೆಯ ಮರು ದಿನ ಯೋಗ ಮಾಡದೇ ಇದ್ದವರೂ ಇದ್ದಾರೆ. ನಿರಂತರ ಯೋಗ ಅನುಷ್ಠಾನ ಮಾಡಬೇಕು. ಆಸನ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಪ್ರತಿದಿನವೂ ಮಾಡಬೇಕು ಎಂದು ಹೇಳಿದರು.
ವಿಶ್ವ ಯೋಗದ ದಿನಾಚರಣೆಯು ಯೋಗದ ಮೂಲಕ ಎಲ್ಲರೂ ಆರೋಗ್ಯ ಪಡೆಯುವಲ್ಲಿ ನೆರವಾಗಲಿ, ಯೋಗದ ಮೂಲಕ ವಿಶ್ವ ಒಂದಾಗಬಹುದು ಎಂಬುದನ್ನು ತಿಳಿಸಲಿ. ವಿಶ್ವ ಯೋಗ ದಿನಾಚರಣೆ ಎಲ್ಲರಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿಶ್ವವನ್ನು ಒಂದಾಗಿಸುತ್ತಿದೆ. ಭಗವದ್ಗೀತೆಯಲ್ಲಿ ಎರಡು ವಾಕ್ಯ ಬರುತ್ತದೆ. ಬೇರೆ ಸಂದರ್ಭದಲ್ಲಿನ ಅದು ಸಾಲಾದರೂ ಯೋಗಕ್ಕೂ ಅದನ್ನು ಜೋಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಗೀತೆಯಲ್ಲಿ ಸಮತ್ವಂ ಯೋಗ ಉಚ್ಛತೆ ಹಾಗೂ ಯೋಗ ಕರ್ಮಸ್ಯ ಕೌಶಲಂ ಎಂಬ ಎರಡೂ ಸಾಲುಗಳು ಬೇರೆ ಬೇರೆ ಶ್ಲೋಕದ ಕೊನೆಯ ಭಾಗದಲ್ಲಿ ಬರುತ್ತದೆ. ಹಾಗಾಗಿ ಆ ಶ್ಲೋಕದಲ್ಲಿ ಅರ್ಥ ಬೇರೆ ಇದ್ದರೂ ನಾವು ಹೇಳುವ ಅರ್ಥ ವಿಭಿನ್ನ. ಸಮತ್ವಂ ಯೋಗ ಉಚ್ಛತೆ ಎಂದರೆ ಸಮತೆಯೇ ಯೋಗ. ಸಮತ್ವ ಯೋಗ. ನಮ್ಮ ಶರೀರದಲ್ಲಿ ನಮ್ಮ ಉಸಿರಾಟದಲ್ಲಿ ಸಮತ್ವ ಬರಬೇಕು. ಶರೀರದ ಸಮತ್ವ ಎಂದರೆ ನೇರವಾಗಿ ಕುಳಿತುಕೊಳ್ಳುವದು, ಆರೋಗ್ಯ ಇಟ್ಟುಕೊಳ್ಳುವದು, ಬ್ರಹ್ಮಚರ್ಯದ ನಿಯಮ ಪಾಲನೆಯು ಶರೀರದ ಸಮತ್ವ. ಉಸಿರಾಟವೂ ಒಂದು ಸಮತ್ವ. ಉಸಿರು ತೆಗೆದುಕೊಳ್ಳುವಷ್ಟೇ ಬಿಡುವುದೂ ಅಷ್ಟೇ ಕಾಲ ಬೇಕು. ಪ್ರಾಣಕ್ಕೆ ಅದರದ್ದೇ ಆದ ಸಮತೆ ಇರುತದೆ. ಗಾಢ ನಿದ್ದೆಯ ಸಮಸ್ಥಿತಿಯೇ ಪ್ರಾಣದ ಸಮಸ್ಥಿತಿ. ಪ್ರಾಣಾಯಾಮದ ಮೂಲಕ ಜಾಗೃತದ ವ್ಯವಸ್ಥೆಯಲ್ಲೂ ಇದನ್ನು ತರಬೇಕು. ಮನಸ್ಸಿನ ಆರೋಗ್ಯದ ಮೂಲಕ ಇದು ಸಾಧ್ಯವಿದೆ. ಆಸನ ಹಾಗೂ ಪ್ರಾಣಾಯಾಮದ ಮೂಲಕವೂ ಹೇಳಬಹುದು. ಆದರೆ ಇದನ್ನು ಸಾಧನೆ ಮಾಡಲು ಕೌಶಲ ಬೇಕು ಎಂದರು.
ಯೋಗ ಪ್ರಾಣಾಯಮ ತಿಳಿದು, ಮನಸ್ಸು ಕೊಟ್ಟು ಮಾಡಬೇಕು. ಒಂದೊಂದು ಆಸನ ಮಾಡುವಾಗಲೂ ನಮ್ಮ ಆಸನದ ಕಡೆ ಲಕ್ಷ್ಯ ಇರಬೇಕು. ಕ್ರಮಬದ್ಧವಾಗಿ ಮಾಡಬೇಕು. ತಿಳಿವಳಿಕೆ ಮೂಲಕ, ಗಮನದ ಮೂಲಕ ಮಾಡಬೇಕು ಎಂದೂ ಶ್ರೀಗಳು ಸಲಹೆ ಮಾಡಿದರು.
ಈ ವೇಳೆ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ನರಸಿಂಹ ಭಟ್ಟ ತಾರಿಮಕ್ಕಿ, ವಿ. ಬಾಲಿಗದ್ದೆ ಶಂಕರ ಭಟ್ಟ, ವಿ. ಉಂಚಳ್ಳಿ ಶಂಕರ ಭಟ್ಟ, ಯೋಗ ಶಿಕ್ಷಕ ವಿನಾಯಕ ಭಟ್ಟ ಕಿಚ್ಚಿಕೇರಿ ಹಾಗೂ ಪಾಠಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.


ನಿಮ್ಮ ಕಾಮೆಂಟ್ ಬರೆಯಿರಿ