ಕೋವಿಡ್ 3ನೇ ಅಲೆ ತಡೆಗೆ ರಾಜ್ಯದಲ್ಲಿ ಪ್ರಥಮವಾಗಿ ಹಾವೇರಿ ಜಿಲ್ಲೆಯಲ್ಲಿ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಗೆ ಚಾಲನೆ

ಹಾವೇರಿ: ಕೋವಿಡ್ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ  ಹಾವೇರಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಎಲ್ಲ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ಕೆ ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಗುರುವಾರದಿಂದ ಮಕ್ಕಳ  ತಪಾಸಣೆಗೆ ಆರಂಭವಾಗಿದೆ.‌ ಮೂರನೇ ಅಲೆಯ ಪರಿಣಾಮ ಕ್ಷೀಣಿಸುವವರೆಗೂ ಮಕ್ಕಳಿಗೆ ಎಲ್ಲ ರೀತಿಯ ಅಗತ್ಯ ವೈದ್ಯಕೀಯ ಉಪಚಾರ ಹಾಗೂ ಪೌಷ್ಠಿಕಾಂಶದ ಆಹಾರ ಒದಗಿಸಲಾಗುವುದು. ಒಟ್ಟಾರೆ ಮಕ್ಕಳ ಆರೋಗ್ಯ ಸದೃಢ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ತಜ್ಞರು ಪಾಲ್ಗೊಂಡು ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಜೂನ್ 25ರಿಂದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಆರಂಭಗೊಳ್ಳಲಿದೆ. ಜುಲೈ 30ರೊಳಗಾಗಿ ಜಿಲ್ಲೆಯ 16 ವರ್ಷದೊಳಗಿನ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗುವುದು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಪಾಲಕರಿಗೂ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ವ್ಯಾಕ್ಸಿನ್ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಲು ಇನ್ನೂ ನಿರ್ಧಾರವಾಗಿಲ್ಲ.  ಮಕ್ಕಳಿಗೆ ಲಸಿಕೆ ಬರುವವರೆಗೂ ಅವರ ಆರೋಗ್ಯದ ಕಾಳಜಿ ಪ್ರಮುಖವಾಗಿದೆ. ಪ್ರತಿಯೊಂದು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರ ದಾಖಲೆಗಳನ್ನು ನಿರ್ವಹಿಸಲಾಗುವುದು. ತಪಾಸಣೆಯ ಸಂದರ್ಭದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಪೌಷ್ಠಿಕ ಆಹಾರ ಕಿಟ್, ಪ್ರೊಟೀನ್ ಸೇರಿದಂತೆ ರೋಗನಿರೋಧ ಶಕ್ತಿ ಹೆಚ್ಚಿಸುವ ಪೂರಕ ಸಾಮಗ್ರಿಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ 30 ರಿಂದ 50 ಸಾವಿರ ಮಕ್ಕಳಿವೆ. ಅವರನ್ನು ತಪಾಸಣೆ ಮಾಡಿ,  ಅವರ  ಬಯೋಡಾಟಾ ಆರೋಗ್ಯ ಸಮಸ್ಯೆಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಮುಂದಿನ ನಾಲ್ಕೈದು ತಿಂಗಳು ಮಾನಿಟರ್ ನಡೆಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡದ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಅವರು ರಾಜ್ಯದಲ್ಲೇ ಪ್ರಥಮವಾಗಿ ಸಚಿವರಾದ ಬಸವರಾಜ ಬೊಮ್ಮಾಯಿ ಕಾಳಜಿಯಿಂದ ಕೋವಿಡ್ ಮೂರನೇ ಅಲೆಯ ಪ್ರಭಾವದಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತದೆ. ಮಕ್ಕಳಿಗೆ ಸಣ್ಣ ಜ್ವರ, ಸಿಂಬಳ ಬಂದರೂ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕು ಮುಂದಿನ ಮೂರು ತಿಂಗಳವರೆಗೆ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಶಿಕ್ಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಚಿಕಿತ್ಸೆಗೆ ನೆರವು ಪಡೆಯಿರಿ ಎಂದು ಮನವಿ ಮಾಡಿಕೊಂಡರು
ಪೌಷ್ಟಿಕ ಕಿಟ್ ವಿತರಣೆ: ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್, ಅಕ್ಷರದಾಸೋಹದಡಿ ಆಹಾರದ ಕಿಟ್, ಅಂಗವಾಡಿ ಮಕ್ಕಳಿಗೆ ಔಷಧಿ ಕಿಟ್, ಕಡಿಮೆ ತೂಕದ ಮಕ್ಕಳಿಗೆ ಪೂರಕ ಪೌಷ್ಠಿಕ ಪ್ರೋಟಿನ್ ಕಿಟ್‍ಗಳನ್ನು ಗೃಹ ಸಚಿವರು ಹಾಗೂ ಶಾಸಕರು ವಿತರಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂಸಿಇಒ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement