ಬೆಂಗಳೂರು : ಲಾಕ್ ಡೌನ್ ಸಂಕಷ್ಟದಿಂದಾಗಿ ಸಂಕಷ್ಟಕೀಡಾಗಿರುವ ರಾಜ್ಯದ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಅವರಿಗೆ ಶೇ.50ರಷ್ಟು ಆಸ್ತಿ ತೆರಿಗೆಯಿಂದ ವಿನಾಯ್ತಿ ಘೋಷಣೆ ಮಾಡಿದೆ.
ಈ ಕುರಿತು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19ರ 2ನೇ ಅಲೆಯು ಪ್ರವಾಸೋದ್ಯಮ ವಲಯಕ್ಕೆ ತೀವ್ರವಾದ ಹೊಡೆತವನ್ನು ನೀಡಿದ್ದರಿಂದ ಹೋಟೆಲ್,ರೆಸ್ಟೋರೆಂಟ್, ರೆಸಾರ್ಟ್, ಮತ್ತು ಮನರಂಜನಾ ಪಾರ್ಕ್ ನ ಭಾಗಿದಾರರು ಮತ್ತು ಪ್ರವಾಸಿ ಮಾರ್ಗದರ್ಶಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಜ್ಯ ಸರ್ಕಾರವು ಈಸಮಯದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ಪುನಶ್ಚೇತನ ಕ್ರಮಗಳಿಂದ ಪ್ರವಾಸಿ ವಲಯವು ಚಟುವಟಿಕೆಗಳನ್ನು, ವ್ಯಾಪಾರ ವಹಿವಾಟನ್ನು ಮರು ಆರಂಭಿಸಲು ಮತ್ತು ಭಾಗಿದಾರರಲ್ಲಿ ಆತ್ಮವಿಶ್ವಾಸ ಚೈತನ್ಯವನ್ನು ಮೂಡಿಸಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕೆಳಕಂಡ ನೆರವನ್ನು ರಾಜ್ಯ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರಕ್ಕೆ ಘೋಷಿಸಿದೆ.
2021-22ನೇ ಹಣಕಾಸಿನ ವರ್ಷದಲ್ಲಿ
ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಮನರಂಜನಾ ಪಾರ್ಕ್ ಗಳು ಶೇ.50ರಷ್ಟು ಆಸ್ತಿ ತೆರಿಗೆಯನ್ನು ಮಾತ್ರ ಪಾವತಿ ಮಾಡಬೇಕಿದ್ದು, ಉಳಿದ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ.
ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳು ಏಪ್ರಿಲ್, ಮೇ, ಜೂನ-2021 ತಿಂಗಳಲ್ಲಿ ವಿದ್ಯುಚ್ಛಕ್ತಿ ಡಿಮ್ಯಾಂಡ್, ಫಿಕ್ಸಡ್ ಶುಲ್ಕ ಪಾವತಿ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾವಣೆ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ 5000 ರೂ.ಗಳ ಹಣಕಾಸು ನೆರವು ನೀಡಲಾಗುತ್ತದೆ. ಹಣವನ್ನುಪ್ರವಾಸಿ ಮಾರ್ಗದರ್ಶಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ.50ರಷ್ಟು ಮೊತ್ತವನ್ನು ಪಾವತಿಸುವುದು ಮತ್ತು ಉಳಿದ ಶೇ.50ರಷ್ಟು ಶುಲ್ಕ ಮೊತ್ತವನ್ನು ದಿನಾಂಕ 31-12-2021ರೊಳಗೆ ಪಾವತಿಸಲು ಸೂಚಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ