ಗುಂಪುಗಾರಿಕೆ ಮಾಡಿ ಪಕ್ಷ ಹಾಳು ಮಾಡುವವರು ನಮಗೆ ಬೇಡವೇ ಬೇಡ’

ಬೆಂಗಳೂರು: ಗುಂಪುಗಾರಿಕೆ ಮಾಡಿ ಪಕ್ಷವನ್ನು ಹಾಳು ಮಾಡುವವರು ನಮಗೆ ಬೇಡವೇ ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವ, ಪಕ್ಷದ ಸಿದ್ಧಾಂತ ಮತ್ತು ನಾಯಕತ್ವ ನಂಬಿ ಬರುವವರನ್ನು ಮಾತ್ರ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆ ಬೇಲೂರು ಪುರಸಭೆಗೆ ಆಯ್ಕೆ ಆಗಿರುವ ಕಾಂಗ್ರೆಸ್ ಸದಸ್ಯರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಭಿನಂದಿಸಿದ ಹಾಗೂ ಹಾಸನ ಜಿಲ್ಲೆಯ ಅನ್ಯಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬ ಮಾತಿಗೆ’ ಬೇಲೂರು ಪುರಸಭೆ ಫಲಿತಾಂಶವೇ ಸಾಕ್ಷಿ. ಇದನ್ನು ಕಾಂಗ್ರೆಸ್ ಪಕ್ಷದ ಎಲ್ಲರೂ ಅರಿತುಕೊಳ್ಳಬೇಕು. ಕಾಂಗ್ರೆಸ್ ಕಚೇರಿ ದೇವಾಲಯವಿದ್ದಂತೆ. ದೇವಾಲಯಕ್ಕೆ ನಾವು ಹೋಗಿ ಪೂಜೆ ಮಾಡುವುದು ಯಾಕೆ? ನಮಗೆ ನೆಮ್ಮದಿ ಸಿಗಲಿ, ಕಷ್ಟ ನಿವಾರಣೆಯಾಗಿ ಶ್ರೇಯಸ್ಸು ಸಿಗಲಿ ಎಂದು ಮಾರ್ಮಿಕವಾಗಿ ಹೇಳಿದರು
ಎಷ್ಟು ಜನ ನನ್ನ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸದ್ಯಕ್ಕೆ ನಾನು ಹೇಳುವುದಿಲ್ಲ. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಬಿಜೆಪಿ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಮನವರಿಕೆಯಾಗಿದೆ. ಈ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತಂದು ಜನರಿಗೆ ಅನುಕೂಲ ಮಾಡಿಕೊಡಬೇಕು. ಜನರ ಹೃದಯ ಗೆಲ್ಲಲು ಬಿಜೆಪಿಯವರಿಗೆ ಎಂತಹ ಅವಕಾಶ ಸಿಕ್ಕಿತ್ತು. ಆದರೆ ಅವರು ಜನರ ಹೃದಯ ಗೆಲ್ಲಲಿಲ್ಲ. ಬದಲಿಗೆ ಜನರಿಗೆ ಬೂದಿ ಕೊಟ್ಟರು. ಆಸ್ಪತ್ರೆ ಬಿಲ್ ಕೊಡಲು ಶಕ್ತಿ ಇಲ್ಲದವರನ್ನು ಸ್ಮಶಾನಕ್ಕೆ ಕಳುಹಿಸಿದರು ಎಂದು ಟೀಕಿಸಿದರು.
ಪಕ್ಷದ ಸಿದ್ದಾಂತ ಹಾಗೂ ನಾಯಕತ್ವ ನಂಬಿ ಬರುವವರ ಪಟ್ಟಿಯನ್ನು ನೀವೆಲ್ಲಾ ಸೇರಿ ಕೊಡಿ. ಅದಕ್ಕಾಗಿ ಸಮಿತಿ ಇದೆ, ಅದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬೇರೆ ಪಕ್ಷದಿಂದ ಬಂದು ಗುಂಪುಗಾರಿಕೆ ಮಾಡುವವರು, ಪಕ್ಷ ಹಾಳು ಮಾಡುವವರು ನಮಗೆ ಬೇಡ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡುವವರನ್ನು ಮಾತ್ರ ಸೇರಿಸಿಕೊಳ್ಳಿ. ಪದಾಧಿಕಾರಿಗಳ ಪೈಕಿ ಯಾರು ಕಾರ್ಯಪ್ರವೃತ್ತವಾಗಿಲ್ಲ, ಅವರನ್ನು ಬದಲಾಯಿಸುತ್ತೇವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement