ಬೆಂಗಳೂರು: ಕರ್ನಾಟಕದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ನಿರ್ಮಾಣವಾಗಲಿದೆ. ಪುತ್ಥಳಿ ನಿರ್ಮಾಣ ಮಾಡಲು ಕಡತವನ್ನು ಮಂಡನೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ.
9/6/2021ರಂದು ಮುಖ್ಯಮಂತ್ರಿಗಳು ಈ ಕುರಿತ ಟಿಪ್ಪಣಿಗೆ ಸಹಿ ಹಾಕಿದ್ದಾರೆ. ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲು ಸೂಕ್ತ ಪ್ರಸ್ತಾವನೆಯೊಂದಿಗೆ ಕಡತವನ್ನು ಮಂಡಿಸಲು ಸೂಚನೆ ನೀಡಿದ್ದಾರೆ.
12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರ ಜಗಜ್ಯೋತಿ ಶ್ರೀ ಬಸವಣ್ಣನವರ ಪುತ್ಥಳಿಯನ್ನು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದ ಆವರಣದಲ್ಲಿ ನಿರ್ಮಿಸುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುಖುಟಪ್ರಾಯವಾಗುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಿದ್ದಾರೆ.
2020ರಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ವಿಧಾನಸೌಧ ಅಥವ ವಿಕಾಸಸೌಧದ ಆವರಣದಲ್ಲಿ ಬಸವಣ್ಣನ ಪುತ್ಥಳಿ ನಿರ್ಮಿಸುವಂತೆ ಮನವಿ ಮಾಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ