
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿನಲ್ಲಿ ಶನಿವಾರ ರಾಜಭವನ ಚಲೋ ನಡೆಸಿದರು.
ರಾಜಭವನಕ್ಕೆ ಮುತ್ತಿಗೆ ಹಾಕಿ ಸರ್ಕಾರದ ಗಮನ ಸೆಳೆದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಸರ್ಕಾರ ಹಿಂತೆಗೆದುಕೊಳ್ಳುವ ವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ರಾಜಭವನ ಚಲೋ ಕೈಗೊಂಡು ಮೆರವಣಿಗೆ ಬಂದಿದ್ದ ರೈತರು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ರೈತರನ್ನು ತಡೆದು ವಶಕ್ಕೆ ಪಡೆದರು.
ತಮ್ಮ ರಾಜಭವನ ಚಲೋ ಬಗ್ಗೆ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ರೈತರ ಬೆಳೆಗಳಿಗೆ ಶಾಸನಾತ್ಮಕ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಕಾನೂನು ಜಾರಿಗೆ ತರಬೇಕು ಎಂದು ದೆಹಲಿ ಗಡಿಭಾಗದಲ್ಲಿ ರೈತರು ಕಳೆದ ಆರು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಹೋರಾಟದ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಇದಕ್ಕಾಗಿ ರಾಜಭವನಕ್ಕೆ ಪ್ರತಿಭಟನೆ ಸಾಗಿ ಒತ್ತಾಯ ಪತ್ರವನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ನೀಡುತ್ತಿದ್ದೇವೆ. ದೇಶದ ಎಲ್ಲ ರಾಜ್ಯಗಳಲ್ಲಿಯೂ ರಾಜಭವನ ಚಲೋ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸುವುದು ರಾಜಭವನ ಚಲೋ ಉದ್ದೇಶವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ