ಗೌರಿ ಲಂಕೇಶ್ ಹತ್ಯೆ ಪ್ರಕರಣ : ಪ್ರಭಾವಕ್ಕೊಳಗಾಗದೆ ಜಾಮೀನು ಅರ್ಜಿ ಇತ್ಯರ್ಥ ಪಡಿಸಲು ಹೈಕೋರ್ಟ್‍ಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಜಾಮೀನು ಅರ್ಜಿಯನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಇತ್ಯರ್ಥ ಪಡಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕ ಹೈಕೋರ್ಟ್‍ಗೆ ಸೂಚಿಸಿದೆ.
ಗೌರಿಲಂಕೇಶ್ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖನ್‍ವಾಲಿಕರ್, ದಿನೇಶ್‍ಮಹೇಶ್ವರಿ, ಅನಿರುದ್ಧ ಭೋಸ್‌ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಕರ್ನಾಟಕ ಹೈಕೋರ್ಟ್‍ಗೆ ಸೂಚನೆ ನೀಡಿದೆ.
ಆರೋಪಿ ಮೋಹನ್ ನಾಯಕ್ ಮೇಲಿನ ಪ್ರಕರಣವನ್ನು ರದ್ದುಗೊಳಿಸಿರುವ ಆದೇಶದಿಂದ ಪ್ರಭಾವಿತರಾಗದೆ ಜಾಮೀನು ಅರ್ಜಿಯನ್ನು ಇತ್ಯರ್ಥ ಪಡಿಸಬೇಕೆಂದು ಸಲಹೆ ನೀಡಿದೆ.
ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅನುಸಾರ ಮೋಹನ ನಾಯಕ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಏ.22ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಆರೋಪಿ ಮೋಹನ್‍ನಾಯಕ್ ಕೂಡ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ರಜಾಕಾಲದ ನ್ಯಾಯಪೀಠ ಕವಿತಾ ಲಂಕೇಶ್ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ.
ಅರ್ಜಿದಾರರು ಎಸ್‍ಎಲ್‍ಪಿ ದಾಖಲಿಸಲು ಮತ್ತು ಮಧ್ಯಂತರ ಆದೇಶ ನೀಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರ ತನ್ನ ಅಭಿಪ್ರಾಯ ತಿಳಿಸಬೇಕೆಂದು ನೋಟಿಸ್‍ನಲ್ಲಿ ಸೂಚಿಸಲಾಗಿದೆ. ಆರೋಪಿ ಮೋಹನ್ ನಾಯಕ್ ಪರ ವಾದವನ್ನು ಆಲಿಸಿದ ನ್ಯಾಯಾಲಯ ನಾವು ಹೈಕೋರ್ಟ್‍ ವಿಚಾರಣೆ ಗಮನಿಸುತ್ತಿದ್ದೇವೆ ಎಂದು ತಿಳಿಸಿದೆ.ಮುಂದಿನ ವಿಚಾರಣೆಯನ್ನು ಜು.15ಕ್ಕೆ ಮುಂದೂಡಿದೆ.
2017ರ ಸೆಪ್ಟೆಂಬರ್ 5ರಂದು ಗೌರಿಲಂಕೇಶ್ ಅವರನ್ನು ರಾಜರಾಜೇಶ್ವರಿನಗರದ ಅವರ ಮನೆಯ ಮುಂದೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳ ಮೋಹನ್ ನಾಯಕ್ ಹತ್ಯೆ ಮಾಡಿದ ಗುಂಪಿನ ಸದಸ್ಯರಾಗಿದ್ದರು ಎಂದು ಆರೋಪಿಸಿತ್ತು.
ಮೋಹನ ನಾಯಕ್‌ ವಿರುದ್ಧ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ದಾಖಲಿಸಿದ್ದ ಆರೋಪವನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement