ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಐಸಿಯುಗೆ ದಾಖಲು

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಭಾನುವಾರ ಸಂಜೆ ಲಕ್ನೋದಲ್ಲಿನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ಜಿಪಿಜಿಐ) ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್‌ ಅವರ ಆರೋಗ್ಯ ಮೇಲ್ವಿಚಾರಣೆ ಮಾಡಲು ನೆಫ್ರಾಲಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಎಂಡೋಕ್ರೈನಾಲಜಿ ಮತ್ತು ನ್ಯೂರೋ-ಓಟಾಲಜಿ ವಿಭಾಗಗಳ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಲ್ಯಾಣ ಸಿಂಗ್ ಅವರ ಆರೋಗ್ಯ ಹದಗೆಟ್ಟ ನಂತರ ಶನಿವಾರ ಲಕ್ನೋದ ರಾಮ್ ಮನೋಹರ್ ಲೋಹಿಯಾ ಸಂಸ್ಥೆಗೆ ದಾಖಲಾಗಿದ್ದರು. ಕಳೆದ ಎರಡು ವಾರಗಳಿಂದ ಅವರು ಅಸ್ವಸ್ಥರಾಗಿದ್ದರು.
ವರದಿಗಳ ಪ್ರಕಾರ, ಕಲ್ಯಾಣ್ ಸಿಂಗ್ ದೇಹದ ಊತವನ್ನು ಹೊಂದಿದ್ದಾರೆ. ರಕ್ತ ಪರೀಕ್ಷೆಯ ಪ್ರಕಾರ ಅವರ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವೂ ಹೆಚ್ಚಾಗಿದೆ ಎಂದು ವರದಿಯಾಗಿದೆ.
ರಾಜಸ್ಥಾನದ ಮಾಜಿ ರಾಜ್ಯಪಾಲರೂ ಆಗಿರುವ ಸಿಂಗ್ ಅವರನ್ನು ಭಾನುವಾರ ಸಂಜೆ 5.30 ರ ಸುಮಾರಿಗೆ ಎಸ್‌ಜಿಪಿಐನ ಐಸಿಯುಗೆ ದಾಖಲಿಸಲಾಗಿದೆ.
ಸಂಸ್ಥೆಯ ಇತ್ತೀಚಿನ ಹೇಳಿಕೆಯು, “ಅವರು ಇಲ್ಲಿಗೆ ಬಂದಾಗ, ಅವರ ರಕ್ತದೊತ್ತಡ ಮತ್ತು ಹೃದಯ ಬಡಿತಗಳು ಸಾಮಾನ್ಯವೆಂದು ಕಂಡುಬಂದವು, ಆದರೆ ಪ್ರಜ್ಞೆಯ ಮಟ್ಟವು ಸ್ವಲ್ಪ ಕಡಿಮೆಯಾಗಿತ್ತು. ಅವರ ಹಿಂದಿನ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ.
ರಾಜನಾಥ್ ಸಿಂಘ್, ಯೋಗಿ ಆದಿತ್ಯನಾಥ ಭೇಟಿ:
ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ರಾಜಸ್ಥಾನದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಜೆಪಿ ನಾಯಕನ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕೇಳಿದ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರು ಭಾನುವಾರ ಡಾ.ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement